ಕಣ್ಣೂರು: ಖತರ್ನಾಕ್ ಮಹಿಳೆಯೊಬ್ಬಳು ವಲಸಿಗ ಉದ್ಯಮಿಯೊಬ್ಬರನ್ನು ತನ್ನ ಹನಿಟ್ರ್ಯಾಪ್ಗೆ ಕೆಡವಿ ಆತನಿಂದ ಬರೋಬ್ಬರಿ 59 ಲಕ್ಷ ರೂ. ಹಣ ಪೀಕಿರುವ ಘಟನೆ ಕೇರಳದ ಕೋಳಿಕ್ಕೋಡ್ನಿಂದ ವರದಿಯಾಗಿದೆ. ಸಂತ್ರಸ್ತ ದೂರು ನೀಡಿದ ಬಳಿಕ ಈ ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಮೂವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಆರು ಮಂದಿ ಎಸ್ಕೇಪ್ ಆಗಿದ್ದು, ಆದಷ್ಟು ಬೇಗ ಅವರನ್ನು ಬಂಧಿಸಲಾವುದು ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಕಣ್ಣೂರಿನ ಕೂಥುಪುರಂಬ ಮೂಲದ ಸಿಂಧು (46), ಪೆರುಮನನ್ನ ಮೂಲದ ಕೆ. ಶನೂಬ್ (39) ಮತ್ತು ಎಂ. ಶರತ್ ಕುಮಾರ್ ಎಂದು ಗುರುತಿಸಲಾಗಿದೆ. ಇವರು ಉದ್ಯಮಿಯಿಂದ ಹಣ, ಚಿನ್ನ ಮತ್ತು ಕಾರನ್ನು ಸುಲಿಗೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಗಲ್ಫ್ ದೇಶದಲ್ಲಿ ಉದ್ಯಮಿಯನ್ನು ಫೇಸ್ಬುಕ್ ಮೂಲಕ ಸಿಂಧು ಪರಿಚಯ ಮಾಡಿಕೊಂಡಿದ್ದಾಳೆ. ಭಾರತದಲ್ಲಿ ಬ್ಯೂಟಿ ಪಾರ್ಲರ್ ಮತ್ತು ಹೋಟೆಲ್ ಉದ್ಯಮ ನಡೆಸುತ್ತಿದ್ದೇನೆಂದು ಹೇಳಿ ಪರಿಚಯ ಮಾಡಿಕೊಂಡಿದ್ದಾಳೆ. ನಮ್ಮ ಉದ್ಯಮದಲ್ಲಿ ಬಂಡವಾಳ ಹೂಡಿ, ನಿಮಗೆ ಒಳ್ಳೆಯ ಲಾಭ ಬರಲಿದೆ ಮತ್ತು ನಿಮ್ಮ ಉದ್ಯಮ ವಿಸ್ತರಣೆಗೂ ನೆರವಾಗಲಿದೆ ಎಂದು ಹೇಳಿದ್ದಾಳೆ.
ಸಿಂಧು ಮಾತನ್ನು ನಂಬಿದ ಉದ್ಯಮಿ, ಗಲ್ಫ್ನಿಂದಲೇ ಆಕೆಗೆ ಹಣ ಕಳುಹಿಸಲು ಆರಂಭಿಸಿದ್ದಾರೆ. ಸುಮಾರು 59 ಲಕ್ಷ ರೂಪಾಯಿಯನ್ನು ಉದ್ಯಮಿ ಸಿಂಧು ಖಾತೆಗೆ ಕಳುಹಿಸಿದ್ದಾರೆ. ನಾನು ಭಾರತಕ್ಕೆ ಬಂದಾಗ ಇಬ್ಬರು ಉದ್ಯಮಿ ಒಪ್ಪಂದಕ್ಕೆ ಸಹಿ ಮಾಡೋಣ ಎಂದು ಸಿಂಧು ಹೇಳಿದ್ದಾಳೆ. ಇತ್ತ ಉದ್ಯಮಿಯಿಂದ ಹಣ ಪಡೆದುಕೊಂಡಿದ್ದ ಸಿಂಧು ಉದ್ಯಮದಲ್ಲಿ ಲಾಭ ಬಂದಿದೆ ಎಂದು ಹೇಳಿ 50 ಸಾವಿರ ರೂ. ಹಣವನ್ನು ಹಿಂದಿರುಗಿಸುತ್ತಾಳೆ.
ಹಣ ಕೊಟ್ಟಿದನ್ನು ನೋಡಿದ ಉದ್ಯಮಿಗೆ ಸಿಂಧು ಮೇಲೆ ನಂಬಿಕೆ ಇನ್ನಷ್ಟು ಬಲವಾಗುತ್ತದೆ. ಬಳಿಕ ಮತ್ತಷ್ಟು ಹಣವನ್ನು ಆಕೆಗೆ ಕಳುಹಿಸುತ್ತಾನೆ. ಇದರ ನಡುವೆ ಉದ್ಯಮಿ ಭಾರತಕ್ಕೆ ಮರಳುತ್ತಾರೆ. ಸಿಂಧು ಭೇಟಿ ಮಾಡಲು ಕರೆ ಮಾಡುತ್ತಾರೆ. ಪ್ರತಿಬಾರಿ ಕರೆ ಮಾಡಿದಾಗಲೆಲ್ಲ ಏನಾದರೂ ಸುಳ್ಳು ಹೇಳಿ ನುಣುಚಿಕೊಳ್ಳುತ್ತಿರುತ್ತಾಳೆ. ಆಕೆಯ ನಡೆ ಉದ್ಯಮಿಯ ಅನುಮಾನಕ್ಕೆ ಕಾರಣವಾಗುತ್ತದೆ. ಬಳಿಕ ಹಣ ಹಿಂತಿರುಗಿಸುವಂತೆ ಆಕೆಯನ್ನು ಕೇಳುತ್ತಾರೆ.
ಸಾಕಷ್ಟು ಸಮಯ ಉದ್ಯಮಿಯನ್ನು ಸತಾಯಿಸಿದ್ದ ಸಿಂಧು, ಕೊನೆಗೆ ಉದ್ಯಮದ ಬಗ್ಗೆ ಮಾತನಾಡಲು ಕರಪರಂಬಿಲ್ನಲ್ಲಿರುವ ಫ್ಲ್ಯಾಟ್ಗೆ ಆಹ್ವಾನಿಸುತ್ತಾಳೆ. ಹೇಳಿದಂತೆಯೇ ಫ್ಲ್ಯಾಟ್ಗೆ ಬರುತ್ತಾನೆ. ಬಂದ ಬಳಿಕ ಆತನನ್ನು ಬೆಡ್ರೂಮ್ಗೆ ಕರೆದೊಯ್ಯುವ ಸಿಂಧು, ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಯತ್ನಿಸುತ್ತಾಳೆ. ಆದರೆ, ಅನುಮಾನಗೊಳ್ಳುವ ಉದ್ಯಮಿ ಆಕೆಯನ್ನು ಹಿಂದಕ್ಕೆ ತಳ್ಳಿ ಹಣ ಕೇಳುತ್ತಾರೆ.
ಇದೇ ವೇಳೆ ಎಂಟ್ರಿ ಕೊಡುವ ಕೆಲವು ಹುಡುಗರ ಗ್ಯಾಂಗ್, ಉದ್ಯಮಿಯನ್ನು ಬೆತ್ತಲೆಯಾಗಿ ಥಳಿಸಿ, ಬೆದರಿಸುತ್ತಾರೆ. ಬಳಿಕ ಸಿಂಧು ಜತೆ ಬೆತ್ತಲೆಯಾಗಿ ಕೆಲವೊಂದು ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿದುಕೊಳ್ಳುತ್ತಾರೆ. ಆತನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸಹ ಕಸಿದುಕೊಳ್ಳುತ್ತಾರೆ ಮತ್ತು ಹಣವನ್ನು ಕಸಿದುಕೊಂಡು ಬಿಟ್ಟು ಕಳುಹಿಸುತ್ತಾರೆ. ಈ ವಿಚಾರವನ್ನು ಎಲ್ಲಿಯಾದರೂ ಬಾಯ್ಬಿಟ್ಟರೆ ಅಥವಾ ಪೊಲೀಸ್ ಠಾಣೆಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ.
ಇದರಿಂದ ಉದ್ಯಮಿ ತುಂಬಾ ಹೆದರಿ ಮಾಹಿತಿಯನ್ನು ಗೌಪ್ಯವಾಗಿ ಇಟ್ಟಿರುತ್ತಾರೆ. ಆದರೆ, ಇಲ್ಲಿಗೆ ಕೊನೆಗೊಳಿಸದ ಸಿಂಧು ಮತ್ತೆ ವಿಡಿಯೋ ತೋರಿಸಿ ಬೆದರಿಕೆ ಹಾಕಿ ಹಣಕ್ಕಾಗಿ ಬೇಡಿಕೆ ಇಡುತ್ತಾಳೆ. ಅವರ ಬೆದರಿಕೆಗಳನ್ನು ಸಹಿಸದ ಉದ್ಯಮಿ ಕೊನೆಗೆ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರಿಗೆ ಸಿಂಧು ಸೇರಿದಂತೆ ಇನ್ನಿಬ್ಬರು ಆರೋಪಿಗಳು ಸಿಕ್ಕಿಹಾಕಿಕೊಳ್ಳುತ್ತಾರೆ. ಸಿಂಧು ಈ ಮೊದಲು ಹಲವರಿಂದ ಇದೇ ರೀತಿ ಹಣ ವಸೂಲಿ ಮಾಡಿದ್ದಳು ಎನ್ನಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.