ನವದೆಹಲಿ: ಭಾರತದ ಮತ್ತು ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ನಡುವೆ ಎತಿಹಾಡ್ ಏರ್ ವೇಸ್ ವಿಮಾನಗಳ ಸಂಚಾರವನ್ನು ಮುಂದಿನ ಆದೇಶದವರೆಗೂ ನಿರ್ಬಂಧಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಎರಡು ದಿನಗಳ ಹಿಂದೆಯಷ್ಟೇ ಯುಎಇ ಸರ್ಕಾರವು ಉಭಯ ರಾಷ್ಟ್ರಗಳ ನಡುವಿನ ವಿಮಾನ ಸಂಚಾರಕ್ಕೆ ನಿರ್ಬಂಧ ವಿಧಿಸಿತ್ತು.
ಯುಎಇ ಸರ್ಕಾರದ ನಿರ್ದೇಶನದ ಪ್ರಕಾರ, ಮುಂದಿನ ಆದೇಶದವರೆಗೂ ಭಾರತದಿಂದ ಯುಎಇಗೆ ಎತಿಹಾಡ್ ನೆಟ್ ವರ್ಕ್ ಮೂಲಕ ಪ್ರಯಾಣಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಎತಿಹಾಡ್ ಭಾರತೀಯ ಪ್ರಯಾಣಿಕರ ಸಂಚಾರಕ್ಕೆ ಯಾವುದೇ ರೀತಿಯಲ್ಲೂ ಅನುಮತಿ ನೀಡುವುದಿಲ್ಲ.
"ಯುಎಇ ಪ್ರಜೆಗಳು, ರಾಜತಾಂತ್ರಿಕ ಕಾರ್ಯಾಚರಣೆ, ಅಧಿಕೃತ ನಿಯೋಗ ಮತ್ತು ಗೋಲ್ಡನ್ ನಿವಾಸ ಹೊಂದಿರುವವರಿಗೆ ಮಾತ್ರ ಯುಎಇ ಪ್ರವೇಶದ ಮೇಲಿನ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ಆದರೆ ಈ ಪ್ರಯಾಣಿಕರು ಕ್ವಾರೆಂಟೈನ್ ನಿಯಮಕ್ಕೆ ಒಳಗಾಗುವುದು ಕಡ್ಡಾಯವಾಗಿದೆ," ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಸರಕು ಸೇವೆಗಳ ಸಂಚಾರಕ್ಕೆ ನಿರ್ಬಂಧವಿಲ್ಲ:
ಎತಿಹಾಡ್ ಭಾರತಕ್ಕೆ ಸಂಚರಿಸುವ ಸರಕುಗಳ ವಿಮಾಗಳ ಕಾರ್ಯಾಚರಣೆಯನ್ನು ಯಥಾವತ್ತಾಗಿ ಮುಂದುವರಿಸಲಿದೆ. ಈ ವಿಮಾನಗಳು ಎರಡೂ ಕಡೆ ಯಾವುದೇ ನಿರ್ಬಂಧವಿಲ್ಲದೇ ಪ್ರಯಾಣಿಸುತ್ತವೆ. ಇದರ ಹೊರತಾಗಿ ಅತಿಥಿಗಳಿಗೆ ತೊಂದರೆ ಆಗದಂತೆ ತಿಳಿಸಲು ಎತಿಹಾಡ್ ಈ ಬಗ್ಗೆ ಮಾಹಿತಿ ನೀಡಿದೆ. "ಟ್ರಾವೆಲ್ ಏಜೆಂಟ್ ಮೂಲಕ ಟಿಕೆಟ್ ಖರೀದಿಸಿದ ಅತಿಥಿಗಳು ಸಹಾಯಕ್ಕಾಗಿ ತಮ್ಮ ಟಿಕೆಟ್ ಖರೀದಿಸಿದ ಏಜೆನ್ಸಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಈ ತಾತ್ಕಾಲಿಕ ನಿರ್ಬಂಧಗಳಿಂದ ಎತಿಹಾಡ್ ತನ್ನ ಪ್ರಯಾಣಿಕರಿಗೆ ಉಂಟಾಗುವ ಯಾವುದೇ ಅನಾನುಕೂಲತೆಗೆ ವಿಷಾದಿಸುತ್ತಿದೆ "ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.