ನವದೆಹಲಿ: ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ರಾಜಕಾರಣಿಗಳು ಮತ್ತು ಇತರರ ಮೇಲೆ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನು ಬಳಸಿ ಸರ್ಕಾರಿ ಸಂಸ್ಥೆಗಳು ಬೇಹುಗಾರಿಕೆ ನಡೆಸಿದ್ದಾರೆ ಎಂಬ ಆರೋಪದ ಬಗ್ಗೆ ನ್ಯಾಯಾಲಯದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ವಕೀಲ ಎಂ ಎಲ್ ಶರ್ಮಾ ಸಲ್ಲಿಸಿದ ಅರ್ಜಿಯಲ್ಲಿ, ಪೆಗಾಸಸ್ ಹಗರಣವು ಭಾರೀ ಕಾಳಜಿಯ ವಿಷಯವಾಗಿದೆ. ಭಾರತೀಯ ಪ್ರಜಾಪ್ರಭುತ್ವ, ನ್ಯಾಯಾಂಗ ಮತ್ತು ದೇಶದ ಭದ್ರತೆಯ ಮೇಲೆ ಗಂಭೀರವಾದ ದಾಳಿ ಇದಾಗಿದೆ. ಹಾಗೆಯೇ ಇದು ನೈತಿಕವಾಗಿ ವಿರೂಪಗೊಳಿಸುವ ಆಡಳಿತ ದುರ್ಬಲಕೆ ಎಂದು ದೂರಲಾಗಿದೆ.
"ಗೌಪ್ಯತೆಯು ಮರೆಮಾಚುವ ಬಯಕೆಯಲ್ಲ. ಈ ಬಗ್ಗೆ ಆಗಾಗೆ ತಿಳಿಸಲಾಗುತ್ತಿದೆ. ಇದು ಬೇರೊಬ್ಬರಿಗಾಗಿ ನಮ್ಮ ಗೌಪ್ಯ ವಿಚಾರಗಳು ಬಳಕೆಯಾಗದಂತೆ ನೋಡಿಕೊಳ್ಳುವ ಒಂದು ವೈಯಕ್ತಿಯ ಜೀವನ. ಇದು ಘನತೆಯ ಅತ್ಯಗತ್ಯ ಅಂಶವಾಗಿದೆ," ಎಂದು ಈ ಅರ್ಜಿಯು ಹೇಳಿದೆ.
ಪೆಗಾಸಸ್ ಬಳಕೆಯು ಕೇವಲ ಸಂಭಾಷಣೆಗಳನ್ನು ಕೇಳುವಂತದ್ದು ಅಲ್ಲ. ಬದಲಾಗಿ ಒಬ್ಬರ ಜೀವನದ ಸಂಪೂರ್ಣ ಡಿಜಿಟಲ್ ಮಾಹಿತಿಯನ್ನು ಪ್ರವೇಶಿಸುವುದು. ಫೋನ್ ಹ್ಯಾಕ್ ಮಾಡುವುದು ಆ ಫೋನ್‌ನ ಮಾಲೀಕ ಮಾತ್ರವಲ್ಲದೇ ಆ ಮಾಲೀಕನ ಜೊತೆ ಮಾತನಾಡುವ ಪ್ರತಿಯೊಬ್ಬ ವ್ಯಕ್ತಿಯನ್ನು ಅಸಹಾಯಕರನ್ನಾಗಿ ಮಾಡುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇನ್ನು ಈ ಪ್ರಕರಣದ ವಿಚಾರಣೆಯು ಕೆಲವೇ ದಿನದಲ್ಲಿ ನಡೆಯಲಿದೆ ಎನ್ನಲಾಗಿದೆ.
2016 ರಿಂದ ಸುಮಾರು 50,000 ದೂರವಾಣಿ ಸಂಖ್ಯೆಗಳನ್ನು ಎನ್‌ಎಸ್‌ಒ ಗ್ರೂಪ್ ಗುರಿಯಾಗಿಸಿಕೊಂಡಿದೆ ಎಂದು ಕೂಡಾ ಪಿಐಎಲ್ ಹೇಳಿಕೊಂಡಿದೆ. ಪೆಗಾಸಸ್ ಕೇವಲ ಕಣ್ಗಾವಲು ಸಾಧನವಲ್ಲ. ಇದು ಭಾರತೀಯ ರಾಜಕೀಯದ ಮೇಲೆ ಪ್ರಯೋಗಿಸಲಾಗುತ್ತಿರುವ ಸೈಬರ್-ಆಯುಧವಾಗಿದೆ. ಅಧಿಕೃತವಾಗಿದ್ದರೂ ಪೆಗಾಸಸ್‌ನ ಬಳಕೆಯು ರಾಷ್ಟ್ರೀಯ ಭದ್ರತಾ ಅಪಾಯವನ್ನುಂಟುಮಾಡುತ್ತದೆ ಎಂದಿದೆ ಈ ಅರ್ಜಿ.
ಹಗರಣದ ತನಿಖೆಗಾಗಿ ಉನ್ನತ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಎಸ್‌ಐಟಿಯನ್ನು ರೂಪಿಸಲು ಮತ್ತು ಪೆಗಾಸಸ್ ಖರೀದಿಸಿದ ಎಲ್ಲ ನ್ಯಾಯಾಧೀಶರು ಮತ್ತು ಮಂತ್ರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಈ ಅರ್ಜಿ ಒತ್ತಾಯಿಸಿದೆ. ಈ ಅರ್ಜಿಯು ಪೆಗಾಸಸ್ ಸಾಫ್ಟ್‌ವೇರ್ ಖರೀದಿಯನ್ನು ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸಲು ಒತ್ತಾಯಿಸಿದೆ.