ನವದೆಹಲಿ: ಚೀನಾದ ಗುಪ್ತಚರ ಅಧಿಕಾರಿಗಳಿಗೆ ಮಾಹಿತಿ ಸೋರಿಕೆ ಮತ್ತು ಸೂಕ್ಷ್ಮ ಮಾಹಿತಿಯನ್ನು ಒದಗಿಸಿದ ಆರೋಪದ ಮೇಲೆ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಮೂಲದ ಫ್ರೀ ಲ್ಯಾನ್ಸ್ ಪತ್ರಕರ್ತನೊಬ್ಬನನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
ಫ್ರೀ ಲ್ಯಾನ್ಸ್ ಪತ್ರಕರ್ತ ರಾಜೀವ್ ಶರ್ಮಾ ಅವರನ್ನು ಜುಲೈ 1 ರಂದು ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿ ಶುಕ್ರವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಶರ್ಮಾರನ್ನು ಏಳು ದಿನಗಳ ಕಸ್ಟಡಿಗೆ ನೀಡಿತು ಎಂದು ಕೇಂದ್ರ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
62 ವರ್ಷದ ಶರ್ಮಾ ಅವರು "ಚೀನಾದ ಗುಪ್ತಚರ ಅಧಿಕಾರಿಗಳಿಗೆ ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ಒದಗಿಸಿದ್ದಾರೆ, ಸಂಭಾವನೆಗೆ ಬದಲಾಗಿ ಭಾರತದ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಧಕ್ಕೆಯುಂಟುಮಾಡಿದ್ದಾರೆ" ಎಂದು ಸಂಸ್ಥೆ ಹೇಳಿದೆ.
"ಶರ್ಮಾ ಮತ್ತು ಇತರ ಅಪರಿಚಿತ ವ್ಯಕ್ತಿಗಳು ಹಣಕ್ಕಾಗಿ ಮಹಿಪಾಲ್ಪುರ್ ಮೂಲದ (ದೆಹಲಿಯ ಒಂದು ಪ್ರದೇಶ) ಚೀನೀಯರು ನಡೆಸುವ ಶೆಲ್ ಕಂಪೆನಿಗಳ 'ಹವಾಲಾ' ಉದ್ಯಮದಲ್ಲಿ ಭಾಗವಹಿಸಿದ್ದಾರೆ ಎಂದು ಇಡಿ ಆರೋಪಿಸಿದೆ. ನಗದು ಹೊರತಾಗಿ, ಚೀನಾದ ವಿವಿಧ ಕಂಪನಿಗಳು ಮತ್ತು ಭಾರತದ ಇತರ ಕೆಲವು ವ್ಯಾಪಾರ ಕಂಪನಿಗಳೊಂದಿಗೆ ಬೃಹತ್ ವಹಿವಾಟು ನಡೆಸಲಾಗಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಇಡಿ ತಿಳಿಸಿದೆ. "ಈ ಚೀನೀ ಕಂಪನಿಗಳು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿರುವ ಶರ್ಮಾ ಅವರಂತಹ ವ್ಯಕ್ತಿಗಳಿಗೆ ಸಂಭಾವನೆ ನೀಡಲು ಚೀನಾದ ಗುಪ್ತಚರ ಸಂಸ್ಥೆಗಳಿಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತಿವೆ" ಎಂದು ಅದು ಹೇಳಿದೆ.
"ರಾಜೀವ್ ಶರ್ಮಾ ಅವರು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಮರೆಮಾಚಲು ಬೇನಾಮಿ ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ಪಡೆಯುತ್ತಿದ್ದರು" ಎಂದು ಸಂಸ್ಥೆ ಹೇಳಿದೆ. ಇಡಿ ಪ್ರಕರಣವು ಕಳೆದ ವರ್ಷ ಶರ್ಮಾ ವಿರುದ್ಧ ಅಫಿಶಿಯಲ್ ಸೀಕ್ರೆಟ್ ಆಕ್ಟ್ (ಒಎಸ್‌ಎ) ಮತ್ತು ಐಪಿಸಿಯ ವಿವಿಧ ವಿಭಾಗಗಳ ಅಡಿಯಲ್ಲಿ ದಾಖಲಾದ ದೆಹಲಿ ಪೊಲೀಸ್ ಎಫ್‌ಐಆರ್ ಅನ್ನು ಆಧರಿಸಿದೆ. ಕಳೆದ ವರ್ಷ ಸೆಪ್ಟೆಂಬರ್ 14 ರಂದು ದೆಹಲಿ ಪೊಲೀಸ್ ವಿಶೇಷ ಕೋಶದಿಂದ ಅವರ ಬಂಧನವಾಗಿತ್ತು, ಆ ವೇಳೆ ಭಾರತೀಯ ಸೇನೆಯ ನಿಯೋಜನೆ ಮತ್ತು ದೇಶದ ಗಡಿ ಕಾರ್ಯತಂತ್ರದ ಬಗ್ಗೆ ಚೀನಾಗೆ ಗುಪ್ತಚರ ಮಾಹಿತಿ ರವಾನಿಸಿದ ಆರೋಪ ಹೊರಿಸಲಾಗಿತ್ತು. ಬಂಧನಕ್ಕೊಳಗಾದ 60 ದಿನಗಳಲ್ಲಿ ಚಾರ್ಜ್‌ಶೀಟ್ ದಾಖಲಾಗಿಲ್ಲ ಎಂಬ ಕಾರಣಕ್ಕೆ ಪತ್ರಕರ್ತನನ್ನು 2020 ರ ಡಿಸೆಂಬರ್‌ನಲ್ಲಿ ದೆಹಲಿ ಹೈಕೋರ್ಟ್ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.
ಶರ್ಮಾ ಅವರು ಸಾವಿರಾರು ಅನುಯಾಯಿಗಳನ್ನು ಹೊಂದಿರುವ "ರಾಜೀವ್ ಕಿಷ್ಕಿಂಧಾ" ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದರು. ಬಂಧನದ ದಿನ ಅವರು ಎರಡು ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಗಡಿ ಉದ್ವಿಗ್ನತೆಯ ಮಧ್ಯೆ ಭಾರತದೊಂದಿಗೆ ಮಾತುಕತೆ ನಡೆಸಿದರೂ ಚೀನಾ ಇನ್ನೂ "ಕಿಡಿಗೇಡಿತನ" ಮಾಡುತ್ತದೆ ಎಂದು ವೀಡಿಯೊವೊಂದರಲ್ಲಿ ಹೇಳಿದೆ. ಇತರ ವಿಡಿಯೋ ದೇಶದ ಪತ್ರಿಕೋದ್ಯಮದ ಸ್ಥಿತಿಯನ್ನು ಕೆಣಕುವಂತಿದೆ.
ಪ್ರೆಸ್ ಕ್ಲಬ್ ಆಫ್ ಇಂಡಿಯಾ (ಪಿಸಿಐ) ದೆಹಲಿ ಪೊಲೀಸರನ್ನು ಶರ್ಮಾ ವಿರುದ್ಧ "ಉನ್ನತ ಮಟ್ಟದ" ಕ್ರಮವನ್ನು ಟೀಕಿಸಿದೆ. "ದೀರ್ಘಕಾಲದ ಫ್ರೀ ಲ್ಯಾನ್ಸ್ ಪತ್ರಕರ್ತ ಮತ್ತು ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಸದಸ್ಯರಾದ ರಾಜೀವ್ ಶರ್ಮಾ ಅವರ ಬಂಧನದ ಬಗ್ಗೆ ನಾವು ಅಚ್ಚರಿಗೊಂಡಿದ್ದೇವೆ" ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.