ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಪರ ಫೆನ್ಸಿಂಗ್ ನಲ್ಲಿ ಪೈಪೋಟಿ ನಡೆಸಿದ್ದ ಮೊದಲ ಮಹಿಳೆ ಎಂಬ ಇತಿಹಾಸ ಸೃಷ್ಟಿಸಿದ ಭವಾನಿ ದೇವಿ, ಎರಡನೇ ಸುತ್ತಿನಲ್ಲಿ ವಿಶ್ವದ ಮೂರನೇ ಕ್ರಮಾಂಕದ ಮನೂನ್ ಬ್ರೂನೆಟ್ ವಿರುದ್ಧ 7-15ರಿಂದ ಸೋತು ಅಭಿಯಾನ ಅಂತ್ಯಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಆಕೆ ದೇಶದ ಕ್ಷಮೆಯಾಚಿಸಿದ್ದಾರೆ.
'ನನ್ನ ಶಕ್ತಿ ಮೀರಿ ಪ್ರಯತ್ನಿಸಿದರೂ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ. ನನ್ನನ್ನು ಕ್ಷಮಿಸಿ. ಪ್ರತಿಯೊಂದು ಅಂತ್ಯವೂ ಒಂದು ಆರಂಭವಾಗಿದೆ. ತರಬೇತಿ ಮುಂದುವರಿಸುತ್ತೇನೆ. 2024 ರ ಒಲಿಂಪಿಕ್ಸ್ ಗುರಿಯೊಂದಿಗೆ ಮುಂದುವರಿಯುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಭವಾನಿ ದೇವಿ ಅವರ ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಕೆಯ ಟ್ವೀಟ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಂದಿಸಿದ್ದಾರೆ. ಶಕ್ತಿ ಮೀರಿ ಹೋರಾಟ ನಡೆಸಿದ್ದೀರಿ ಎಂದು ಟ್ವೀಟರ್ ನಲ್ಲಿ ಪ್ರಶಂಸಿಸಿದ್ದಾರೆ.
'ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೋರಾಡಿದ್ದೀರಿ ನಮಗದೇ ಮುಖ್ಯ. ಗೆಲುವು-ಸೋಲು ಜೀವನದ ಒಂದು ಭಾಗ ಎಂದು ಪ್ರಧಾನಿ ಹೇಳಿದ್ದಾರೆ. ನಿಮ್ಮ ಸೇವೆಯ ಬಗ್ಗೆ ಭಾರತ ಹೆಮ್ಮೆಪಡುತ್ತದೆ. ನಮ್ಮ ದೇಶದ ಎಲ್ಲ ನಾಗರಿಕರಿಗೆ ನೀವು ಸ್ಫೂರ್ತಿಯಾಗಲಿದ್ದೀರಿ ಎಂದು ಪ್ರಧಾನಿ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ.
ತಮಿಳುನಾಡಿನ ಚಂದಲವಾಡ ಆನಂದ ಸುಂದರಮನ್ ಭವಾನಿ ದೇವಿ ತಮ್ಮ ಮೊದಲ ಒಲಿಂಪಿಕ್ಸ್ ನಲ್ಲಿ ಸ್ಪೂರ್ತಿದಾಯಕ ಪ್ರದರ್ಶನ ನೀಡಿದರು. ಮೊದಲ ಸುತ್ತಿನಲ್ಲಿ ಟ್ಯೂನಿಷಿಯಾದ ನಾದಿಯಾ ಬೆನ್ ಅಜೀಜ್ ವಿರುದ್ದ 15-3ರಿಂದ ಜಯಗಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಒಲಿಂಪಿಕ್ಸ್ ಫೆನ್ಸಿಂಗ್ ನ ಒಂದು ಪಂದ್ಯವನ್ನು ಗೆದ್ದ ಮೊದಲ ಭಾರತೀಯೆ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.