ಕೋಝಿಕ್ಕೋಡ್:: ಆನ್‍ಲೈನ್ ತರಗತಿಗಾಗಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್‍ಫೋನ್ ಖರೀದಿಸಿಕೊಡುವ ಹೆತ್ತವರಿಗೆ ದಿನಕ್ಕೊಂದು ತಲೆನೋವು ಕಾಡಲರಂಭಿಸಿದೆ. ಕೋಯಿಕ್ಕೋಡಿನಲ್ಲಿ ಆನ್‍ಲೈನ್ ತರಗತಿಗೆ ಕೊಡಮಾಡಿದ ಸ್ಮಾರ್ಟ್‍ಫೋನ್ ಮೂಲಕ ಪಬ್ಜಿ ಗೇಮ್‍ಗಾಗಿ ಒಂದು ಲಕ್ಷ ರೂ. ನಗದನ್ನು ಹೆತ್ತವರ ಖಾತೆಯಿಂದ ಡ್ರಾ ಮಾಡಿರುವುದು ಸೈಬರ್ ಪೊಲೀಸರು ನಡೆಸಿದ ತನಿಖೆಯಿಂದ ಪತ್ತೆಯಾಗಿದೆ.
ಕೋಯಿಕ್ಕೋಡಿನ ಗೃಹಿಣಿಯೊಬ್ಬರು ತಮ್ಮ ಖಾತೆಯಿಂದ ಒಂದು ಲಕ್ಷ ರೂ. ನಗದು ಯಾರೋ ಡ್ರಾ ಮಾಡಿರುವ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಒಂಬತ್ತು ಹಾಗೂ ಹತ್ತನೇ ತರಗತಿಯಲ್ಲಿ ಕಲಿಯುವ ತನ್ನ ಇಬ್ಬರು ಮಕ್ಕಳು, ತನ್ನ ಸಂಬಂಧಿ ವಿದ್ಯಾರ್ಥಿ ಜತೆಗೂಡಿ ಆನ್‍ಲೈನ್ ಗೇಮಿಗಾಗಿ ಹಣ ಖರ್ಚುಮಾಡಿರುವ ಮಾಹಿತಿ ಲಭಿಸಿದೆ. ಗೃಹಿಣಿ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಆನ್‍ಲೈನ್ ತರಗತಿಗಾಗಿ ಮಕ್ಕಳಿಗೆ ಸ್ಮಾರ್ಟ್‍ಫೋನ್ ಹಾಗೂ ಟ್ಯಾಬ್ ಖರೀದಿಸಿ ನೀಡಿದ್ದರು. ಇದರಲ್ಲಿ ನಿಷೇಧಿತ ಪಬ್ಜಿ ಗೇಮ್ ಆಟವನ್ನು ಈ ಮಕ್ಕಳು ಆಡಲಾರಂಭಿಸಿದ್ದರು. ಆಟದಲ್ಲಿ ಹೊಸ ಹಂತಗಳನ್ನು ತಲುಪಲು ಮಕ್ಕಳಿಗೆ ಹಣದ ಅಗತ್ಯ ಕಂಡುಬಂದಾಗ, ಇಬ್ಬರೂ ಮಕ್ಕಳು ತಾಯಿಯ ಇಂಟರ್‍ನೆಟ್ ಬ್ಯಾಂಕಿಂಗ್ ಪಾಸ್‍ವರ್ಡ್ ಸೇರಿದಂತೆ ಇತರ ಮಾಹಿತಿ ಸಂಗ್ರಹಿಸಿ ಖಾತೆಯಿಂದ ಹಣ ಡ್ರಾ ಮಾಡಿಕೊಂಡಿದ್ದರು. ಖಾತೆಯಿಂದ ಹಣ ಡ್ರಾ ಮಾಡಿರುವ ಬಗ್ಗೆ ತಾಯಿ ಪೊಲೀಸರಿಗೆ ದೂರು ನೀಡುವಾಗಲೂ ಈ ಬಗ್ಗೆ ಮಕ್ಕಳು ಬಾಯಿ ಬಿಡಲಿಲ್ಲ. ಸೈಬರ್ ಸೆಲ್ ಇನ್ಸ್‍ಪೆಕ್ಟರ್ ಪಿ.ರಾಜೇಶ್ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಮಾಹಿತಿ ಬಹಿರಂಗಗೊಂಡಿದೆ.