ಹಾನಿಗೊಳಗಾಗಿರುವ ಪರಿಸರ ವ್ಯವಸ್ಥೆಗಳನ್ನು ಸಾಧ್ಯವಾದಷ್ಟು ಸರಿಪಡಿಸಿ ಮರಳಿ ಸುವ್ಯವಸ್ಥೆಗೆ ತರುವ ತುರ್ತು ಹಿಂದೆಂದಿಗಿಂತಲೂ ಇಂದು ಎದುರಾಗಿದೆ. ಕೋವಿಡ್-19 ಸಾಂಕ್ರಾಮಿಕವೂ ಪ್ರಾಕೃತಿಕ ಪರಿಸರದ ಅಸಮತೋಲನ, ಜೀವಸಂಕುಲಗಳ ನಷ್ಟ ಹಾಗೂ ಪ್ರಕೃತಿಯ ಶೋಷಣೆಯ ಒಂದು ನೇರ ಪರಿಣಾಮವಾಗಿದೆ. ವನ್ಯಜೀವಿಗಳು, ಕಾಡು ಪ್ರಾಣಿಗಳು ಆಗಾಗ ಕಾಡುಗಳಿಂದ ನೇರವಾಗಿ ಮನುಷ್ಯರ ಮೇಲೆ ದಾಳಿ ಮಾಡುತ್ತಾ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ಸೃಷ್ಟಿಸುತ್ತಿವೆ.
ಪರಿಸರ ನಾಶವನ್ನು ತಡೆಯಲು ನಾವು ನಮ್ಮ ಭೂಮಿಯನ್ನು, ಬೇಸಾಯ ಮಾಡುವ ಕ್ರಮವನ್ನು, ನಮ್ಮ ಮಣ್ಣುಗಳನ್ನು ಬಳಸುವ ರೀತಿಯನ್ನು, ನಮ್ಮ ಕರಾವಳಿ ಹಾಗೂ ಸಾಗರ ಪರಿಸರ ವ್ಯವಸ್ಥೆಗಳನ್ನು ಬಳಸುವ ವಿಧಾನಗಳನ್ನು ಹಾಗೂ ನಮ್ಮ ಅರಣ್ಯಗಳನ್ನು ನಿಭಾಯಿಸುವ ಕ್ರಮವನ್ನು ಬದಲಿಸಲೇಬೇಕಾದ ಕಾಲ ಬಂದಿದೆ. ದಶಕಗಳ ಕಾಲ ಪರಿಸರದ ಮೇಲೆ ಆಗಿರುವ ಹಾನಿಯನ್ನು ರಾತ್ರಿ ಬೆಳಗಾಗುವುದರೊಳಗೆ ಸರಿಪಡಿಸಲು ಸಾಧ್ಯವಿಲ್ಲ. ಆದರೆ ನಾವು ಎಲ್ಲಾದರೂ ಒಂದು ಕಡೆಯಿಂದ ನಮ್ಮ ಕೆಲಸ ಆರಂಭಿಸಲೇ ಬೇಕಾಗಿದೆ. ಇದಕ್ಕಾಗಿ ಈ ಸಾಲಿನ ವಿಶ್ವ ಪರಿಸರ ದಿನದಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಹಾಗೂ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯು ಪರಿಸರ ವ್ಯವಸ್ಥೆ ಸರಿಪಡಿಸುವ 'ವಿಶ್ವಸಂಸ್ಥೆಯ ದಶಕ' ಎಂಬ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಪ್ರತಿಯೊಂದು ಭೂಖಂಡ ಮತ್ತು ಪ್ರತಿಯೊಂದು ಸಾಗರದಲ್ಲಿ ಪರಿಸರ ವ್ಯವಸ್ಥೆಗಳ ಹಾನಿಗೊಳಿಸುವಿಕೆಯನ್ನು ತಡೆಯುವುದು, ಪ್ರತಿಬಂಧಿಸುವುದು ಈ ಕಾರ್ಯಕ್ರಮಗಳ ಉದ್ದೇಶವಾಗಿದೆ.
ಪರಿಸರದ ಈ ಯಥಾಸ್ಥಾಪನೆಯ, ಪುನಃಸ್ಥಾಪನೆಯ ದಶಕದಲ್ಲಿ ಭಾರತ ಸಕ್ರಿಯವಾಗಿ ಭಾಗವಹಿಸಲೇ ಬೇಕು. ಯಾಕೆಂದರೆ ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ (ರೆಸ್ಟೊರೇಶನ್) ಪರಿಸರ ಹಾಗೂ ಜನರಿಗೆ ಒಟ್ಟಾಗಿ ಒಳಿತು ಮಾಡುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರು ಜಮೀನಿನ ಪುನಃಸ್ಥಾಪನೆಯನ್ನು 2030ರ ವೇಳೆಗೆ ಈಗಿರುವ 21 ಮಿಲಿಯನ್‌ನಿಂದ 26 ಮಿಲಿಯನ್ ಹೆಕ್ಟೇರ್‌ಗಳಿಗೆ ಹೆಚ್ಚಿಸುವುದಾಗಿ 2019ರಲ್ಲೇ ಘೋಷಿಸಿದ್ದರು ಈ ಘೋಷಣೆಯನ್ನು ಸಾಕಾರಗೊಳಿಸಲು ನಾವು ಇಡಬೇಕಾದ ಹಲವು ಹೆಜ್ಜೆಗಳಿವೆ. ಮೊದಲನೆಯದಾಗಿ, ವಾತಾವರಣಕ್ಕೆ ಸೇರುವ ಇಂಗಾಲವನ್ನು ಕಡಿಮೆಮಾಡಲು ಗಂಭೀರವಾಗಿ ಪ್ರಯತ್ನಿಸಬೇಕು. ಯಾಕೆಂದರೆ ಇಂಗಾಲದಿಂದಾಗುವ ಹವಾಮಾನ ಬದಲಾವಣೆ ಮಾನವ ಜೀವಿಗಳಿಗಷ್ಟೇ ಅಪಾಯವಲ್ಲ, ಭೂಮಿಯಲ್ಲಿರುವ ಎಲ್ಲ ಜೀವರಾಶಿಗಳನ್ನು ಉಳಿಸುವ ಸೂಕ್ಷ್ಮ ಪರಿಸರ ವ್ಯವಸ್ಥೆಗಳಿಗೂ ಅಪಾಯಕಾರಿಯಾಗಿದೆ. ಜಾಗತಿಕವಾಗಿ 2030ರ ವೇಳೆಗೆ ನಾವು ಕಾರ್ಬನ್ ಡಯಾಕ್ಸೈಡ್‌ನ ನಿವ್ವಳ ಪ್ರಮಾಣವನ್ನು (2010ರ ಪ್ರಮಾಣಕ್ಕೆ ಹೋಲಿಸಿದಾಗ) ಶೇ. 45ರಷ್ಟು ಕಡಿಮೆ ಮಾಡಲೇ ಬೇಕಾಗಿದೆ. ಈ ಗುರಿ ಸಾಧನೆಗಾಗಿ ಭಾರತ ತನ್ನ ಇಂಧನ ವ್ಯವಸ್ಥೆಗಳು, ಜಮೀನು ಬಳಕೆ, ಕೃಷಿ, ಅರಣ್ಯ ಸಂರಕ್ಷಣೆ, ನಗರಾಭಿವೃದ್ಧಿ ಮೂಲ ಚೌಕಟ್ಟು ಮತ್ತು ಜೀವನ ಶೈಲಿಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಕಾರ್ಯಾಚರಿಸಬೇಕಾಗಿದೆ.
ಎರಡನೆಯದಾಗಿ, ನಾವು ನಮ್ಮ ಆರ್ಥಿಕ ಹಾಗೂ ಉತ್ಪಾದನಾ ವ್ಯವಸ್ಥೆಗಳನ್ನು ಬದಲಿಸಬೇಕು. ನಿರ್ಧಾರ ತೆಗೆದುಕೊಳ್ಳುವಾಗ ನೈಸರ್ಗಿಕ ಬಂಡವಾಳವನ್ನು ಪರಿಗಣಿಸುವುದು, ಪರಿಸರಕ್ಕೆ ಹಾನಿಕರವಾದ ಸಬ್ಸಿಡಿಗಳನ್ನು ನಿರ್ಮೂಲನಗೊಳಿಸುವುದು ಮತ್ತು ಕಡಿಮೆ ಇಂಗಾಲ ಹಾಗೂ ಪರಿಸರ ಸ್ನೇಹಿ ತಂತ್ರಜ್ಞಾನಗಳಲ್ಲಿ ಬಂಡವಾಳ ತೊಡಗಿಸುವುದು ಈ ನಿಟ್ಟಿನಲ್ಲಿ ಬಹಳ ಮುಖ್ಯವಾದ ಅಂಶಗಳು.
ಅಂತಿಮವಾಗಿ, ನಮ್ಮ ಪರಿಸರವನ್ನು ಪುನಃ ಪರಿಶುದ್ಧಗೊಳಿಸುವ ನವೀಕರಿಸುವ ಶಕ್ತಿ ನಮ್ಮ ಬಳಿಯೇ ಇದೆ. ಉತ್ತಮ ಭವಿಷ್ಯಕ್ಕಾಗಿ ಪ್ರಕೃತಿಯೊಂದಿಗೆ ಹೊಂದಿಕೊಳ್ಳುವ, ತ್ಯಾಜ್ಯವನ್ನು ಕಡಿಮೆ ಮಾಡುವ, ಬದಲಾವಣೆಗೆ ಒಗ್ಗಿಕೊಳ್ಳುವ ಹಾಗೂ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿ ಇರುವ ಆಹಾರ ವ್ಯವಸ್ಥೆಗಳನ್ನು ಸೃಷ್ಟಿಸುವ ದಿಕ್ಕಿನಲ್ಲಿ ಭಾರತ ಸಾಗಬೇಕಾಗಿದೆ. ಇದು ಸಾಧ್ಯವಾಗಬೇಕಾದರೆ ಸಣ್ಣ ಪ್ರಮಾಣದ ರೈತರನ್ನು ಹಾಗೂ ಮಹಿಳಾ ಬೇಸಾಯಗಾರರನ್ನು ಸಶಕ್ತರನ್ನಾಗಿಸುವುದು, ಬಳಕೆಯ ಮಾದರಿಗಳನ್ನು, ಉಪಭೋಗ ವಿಧಾನಗಳನ್ನು ಬದಲಾಯಿಸುವುದು ಮತ್ತು ಸಾಮಾಜಿಕ ಕ್ರಮಗಳನ್ನು ಹಾಗೂ ವಾಣಿಜ್ಯ ಪದ್ಧತಿಗಳನ್ನು ಸವಾಲಿಗೆ ಒಡ್ಡುವುದು ಅತ್ಯಗತ್ಯ. ಇದನ್ನು ಸಾಮರ್ಥ್ಯ ನಿರ್ಮಾಣ ಹಾಗೂ ಶಿಕ್ಷಣದ ಮೂಲಕ ಸಾಧಿಸಬಹುದು. ಸಹಕಾರ ಹಾಗೂ ಸಹಯೋಗದ ಮೂಲಕ ನಮ್ಮ ಉಪಭೋಗ, ಪ್ರಯಾಣದ ರೀತಿಯನ್ನು ಬದಲಾಯಿಸಲು ಬೇಕಾದ ಶಕ್ತಿ ಸಾಮರ್ಥ್ಯ ಈಗಾಗಲೇ ನಮ್ಮಲ್ಲಿದೆ. ನಾವು ಈ ಜವಾಬ್ದಾರಿಯಿಂದ ನುಣುಚಿಕೊಳ್ಳದಿರೋಣ. ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿರುವಂತೆ, ಪ್ರಕೃತಿಯೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳುವುದೇ 21ನೇ ಶತಮಾನದಲ್ಲಿ ಮಾಡಬೇಕಾದ ಮುಖ್ಯ ಕೆಲಸ.