HEALTH TIPS

ಹೊಸದಾಗಿ ಆರಂಭಿಸಬೇಕಾದೀತೆ ಸಾಕ್ಷರತಾ ಆಂದೋಲನ?

           ಕೊರೋನ ಮತ್ತು ಲಾಕ್‌ಡೌನ್‌ನಿಂದಾಗಿ ಆರ್ಥಿಕ ಕ್ಷೇತ್ರದಲ್ಲಿ ಸಂಭವಿಸಿದ ದುರಂತ ಚರ್ಚೆಯಾದಷ್ಟು, ಶೈಕ್ಷಣಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ದುರಂತಗಳು ಮುನ್ನೆಲೆಗೆ ಬರುತ್ತಿಲ್ಲ. ಶೈಕ್ಷಣಿಕ ವಲಯದಲ್ಲಾಗುತ್ತಿರುವ ತಲ್ಲಣಗಳಿಂದಾಗಿ ಭವಿಷ್ಯದಲ್ಲಿ ನಾವು ಅನುಭವಿಸಲಿರುವ ನಷ್ಟಗಳು ತಕ್ಷಣದ ಅರಿವಿಗೆ ನಿಲುಕದೇ ಇರುವುದರಿಂದ, ಅದನ್ನು ತಲೆಕೆಡಿಸಿಕೊಳ್ಳುವ ವಿಷಯವೆಂದು ರಾಜಕಾರಣಿಗಳು ಕೂಡ ಭಾವಿಸುತ್ತಿಲ್ಲ. ಶಾಲಾ ಬಾಗಿಲನ್ನು ತೆರೆಯಲು ಸರಕಾರವೇನೋ ಸಿದ್ಧವಿದೆ. ಆದರೆ ಮೂರನೆಯ ಅಲೆಯ ಕುರಿತಂತೆ ಬಿತ್ತಿರುವ ಮುನ್ನೆಚ್ಚರಿಕೆ ಸರಕಾರವನ್ನು            ಅಸಹಾಯಕವನ್ನಾಗಿಸಿದೆ. ಇದೇ ಸಂದರ್ಭದಲ್ಲಿ, ಶೈಕ್ಷಣಿಕ ವರ್ಷವನ್ನು ಆರಂಭಿಸುವುದಕ್ಕಾಗಿ ಸರಕಾರ ಸಿದ್ಧತೆಗಳನ್ನು ಮಾಡಿಕೊಂಡಿದೆಯಾದರೂ, ಅವೆಲ್ಲವೂ ತೇಪೆ ಕಾರ್ಯಕ್ರಮಗಳು ಎನ್ನುವುದು ನಿಧಾನಕ್ಕೆ ಬಹಿರಂಗವಾಗುತ್ತಿದೆ. ಉನ್ನತ ಶಿಕ್ಷಣ ಕಲಿಕೆಯನ್ನು ವಿದ್ಯಾರ್ಥಿಗಳಿಗೆ ಅತ್ಯಂತ ಸರಳ ಮತ್ತು ಸುಲಭಗೊಳಿಸುವ ನಿಟ್ಟಿನಲ್ಲಿ ಟ್ಯಾಬ್ಲೆಟ್ ಪಿಸಿಗಳನ್ನು ವಿತರಿಸುವ ಯೋಜನೆಯನ್ನು ಸರಕಾರ ಹಾಕಿಕೊಂಡಿದೆ ಮತ್ತು ಅದನ್ನು 'ಸ್ಮಾರ್ಟ್ ಕ್ಲಾಸ್ ರೂಂ ಕ್ರಾಂತಿ' ಎಂದೂ ಕರೆದಿದೆ. ಸರಕಾರ ತನ್ನ ಮಿತಿಯಲ್ಲಿ ಆನ್‌ಲೈನ್ ತರಗತಿಗಳನ್ನು ಯಶಸ್ವಿಗೊಳಿಸುವುದಕ್ಕೆ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಶ್ಲಾಘನೀಯ. ಆದರೆ ರಾಜ್ಯವೆಂದಲ್ಲ, ಇಡೀ ದೇಶವೇ ಆನ್‌ಲೈನ್ ಶಿಕ್ಷಣಕ್ಕೆ ಯೋಗ್ಯವಾದ ವ್ಯವಸ್ಥೆಯನ್ನು ಹೊಂದಿಲ್ಲ. ಅನಿರೀಕ್ಷಿತವಾಗಿ ನೋಟು ನಿಷೇಧ ಮಾಡಿ 'ಡಿಜಿಟಲ್ ವ್ಯವಹಾರಗಳಿಗೆ ಆದ್ಯತೆ ನೀಡಿ' ಎಂದು ಪ್ರಧಾನಿ ಕರೆ ನೀಡಿದಂತೆಯೇ, ಇದೀಗ ಶಾಲಾ ಬಾಗಿಲುಗಳನ್ನ್ನು ಮುಚ್ಚಿ ಆನ್‌ಲೈನ್ ಶಿಕ್ಷಣವನ್ನು ಘೋಷಿಸಲಾಗಿದೆ. ಬ್ಯಾಂಕುಗಳಿಗೆ ತೆರಳಿ ವ್ಯವಹಾರ ಮಾಡುವುದನ್ನೇ ಸರಿಯಾಗಿ ಅರಿಯದ ಜನಸಾಮಾನ್ಯರು ಆನ್‌ಲೈನ್‌ನಲ್ಲಿ ಹಣದ ವ್ಯವಹಾರ ಮಾಡುವುದು, ಶಾಲೆಗೆ ತೆರಳಿ ವಿದ್ಯೆ ಕಲಿಯುವುದೇ ಕಷ್ಟ ಎನ್ನುವ ಸ್ಥಿತಿಯಲ್ಲಿರುವವರು ಆನ್‌ಲೈನ್‌ನಲ್ಲಿ ವಿದ್ಯೆ ಕಲಿಯುವುದು ಎರಡೂ ಒಂದೇ ಆಗಿದೆ. ಆನ್‌ಲೈನ್ ಶಿಕ್ಷಣ ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವೇ ಆಗಿದ್ದರೂ, ಆ ಶಿಕ್ಷಣವನ್ನು ಎಲ್ಲರಿಗೂ ಸಮಾನವಾಗಿ ಒದಗಿಸುವಲ್ಲಿ ಸರಕಾರ ವಿಫಲವಾಗಿದೆ ಅಥವಾ ಅಸಹಾಯಕವಾಗಿದೆ.


                ಕೇಂದ್ರ ಸರಕಾರದ ಅಧಿಕೃತ ಅಂಕಿಅಂಶದ ಪ್ರಕಾರ ಕೇರಳದಲ್ಲಿ ಆನ್‌ಲೈನ್‌ಗೆ ಸಂಬಂಧಪಟ್ಟ ಮೂಲಭೂತ ಸೌಕರ್ಯವಿಲ್ಲದೆ 30 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಬಿಹಾರದಲ್ಲಿ ಇದು ಒಂದು ಕೋಟಿಯನ್ನು ದಾಟಿದೆ. ಒಟ್ಟು ದೇಶದಲ್ಲಿ ಅದೆಷ್ಟು ಕೋಟಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿರಬಹುದು ಎನ್ನುವುದನ್ನು ಕೇಂದ್ರ ಸರಕಾರದ ಮಾಹಿತಿಗಳ ಆಧಾರದಲ್ಲೇ ನಾವು ಊಹಿಸಬಹುದಾಗಿದೆ. ಸರಕಾರದ ಲೆಕ್ಕಕ್ಕೆ ಸಿಗದೇ ಇರುವ ಸಂಖ್ಯೆಯಂತೂ ದೊಡ್ಡ ಪ್ರಮಾಣದಲ್ಲಿದೆ. ಒಟ್ಟಿನಲ್ಲಿ ಈ ದೇಶದ ಶೇ. 50ರಷ್ಟು ವಿದ್ಯಾರ್ಥಿಗಳು ಬೇರೆ ಬೇರೇ ಕಾರಣಗಳಿಗಾಗಿ ಶಿಕ್ಷಣದಿಂದ ವಂಚಿತರಾಗಿದ್ದಾರೆ ಮತ್ತು ಇದು ದೇಶದ ಭವಿಷ್ಯದ ಮೇಲೆ ಬೀರುವ ಪರಿಣಾಮ ಏನು ಎನ್ನುವುದನ್ನು ಸರಕಾರ ಈವರೆಗೆ ಅಂದಾಜಿಸಲು ಹೋಗಿಲ್ಲ. ಮೇಲಿನ ಅಂಕಿಅಂಶಗಳನ್ನು ಸರಕಾರ ಮೊಬೈಲ್ ಇದೆಯೋ ಇಲ್ಲವೋ ಎನ್ನುವುದನ್ನಷ್ಟೇ ಆಧರಿಸಿ ನೀಡಿದೆ. ಮೊಬೈಲ್‌ಗಳು ಇದ್ದಾಕ್ಷಣ ವಿದ್ಯಾರ್ಥಿಗಳು ಶಿಕ್ಷಣವನ್ನು ತನ್ನದಾಗಿಸಲು ಸಾಧ್ಯವಾಗುವುದಿಲ್ಲ. ಮೊಬೈಲ್‌ಗಳಿಗೆ ಕರೆನ್ಸಿ ಹಾಕುವ ಶಕ್ತಿ ಪಾಲಕರಲ್ಲಿ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಇಂಟರ್‌ನೆಟ್ ಸೌಲಭ್ಯವೂ ಅವರಿಗಿರಬೇಕು. ಗ್ರಾಮೀಣ ಪ್ರದೇಶದಲ್ಲಿ ಇಂಟರ್‌ನೆಟ್‌ಗಳು ಹೇಗೆ ಕೆಲಸ ಮಾಡುತ್ತಿವೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಕೆಲವು ಖಾಸಗಿ ಶಾಲೆಗಳಂತೂ ಕೇವಲ ಹಾಜರಾತಿಯನ್ನು ಹಾಕುವುದಕ್ಕಷ್ಟೇ ಆನ್‌ಲೈನ್ ಶಿಕ್ಷಣವನ್ನು ತೆರೆದಿವೆೆ. ನೆಟ್‌ವರ್ಕ್ ಕೊರತೆಯಿಂದಾಗಿ ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ಬೋಧಿಸಲು ಶಿಕ್ಷಕರಿಗೆ ಸಾಧ್ಯವಾಗುತ್ತಿಲ್ಲ. ಶಿಕ್ಷಕರು ಸೇರಿದಂತೆ ಸಿಬ್ಬಂದಿಗೆ ವೇತನ ನೀಡಬೇಕಾದ ಅನಿವಾರ್ಯತೆಯಿರುವುದರಿಂದ ಶುಲ್ಕ ವಸೂಲಿ ಮಾಡುವುದಕ್ಕಾಗಿ ಆನ್‌ಲೈನ್ ಶಿಕ್ಷಣ ಎಂಬಂತಾಗಿದೆ. ಲಾಕ್‌ಡೌನ್‌ನಿಂದಾಗಿ ಆರ್ಥಿಕವಾಗಿ ಕುಸಿದು ಕೂತಿರುವ ಪಾಲಕರು, ವಿದ್ಯಾರ್ಥಿಗಳ ಶುಲ್ಕವನ್ನು ಪಾವತಿಸುವ ಶಕ್ತಿಯನ್ನೂ ಹೊಂದಿಲ್ಲ. ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಶಾಲೆಗಳು ಆನ್‌ಲೈನ್ ಶಿಕ್ಷಣದ 'ಸೌಭಾಗ್ಯ'ವನ್ನು ನಿರಾಕರಿಸುತ್ತಿರುವ ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ.


               ಇದೇ ಸಂದರ್ಭದಲ್ಲಿ, ಇಂಟರ್‌ನೆಟ್‌ನ ವ್ಯಾಪ್ತಿ ಸಿಗದೆ ವಿದ್ಯಾರ್ಥಿಗಳು ಬೆಟ್ಟ, ಗುಡ್ಡಗಳನ್ನು, ಮರಗಳನ್ನು ಹತ್ತಿ ಪಾಠ ಕೇಳುತ್ತಿರುವ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ಮಳೆಗಾಲದಲ್ಲಿ ನೆರೆ, ಪ್ರವಾಹಗಳೂ ವಿದ್ಯಾರ್ಥಿಗಳ ಪಾಲಿಗೆ ಆನ್‌ಲೈನ್ ಶಿಕ್ಷಣ ಕಷ್ಟವಾಗಿಸಿದೆ. ಆರ್ಥಿಕವಾಗಿ ಜರ್ಜರಿತವಾಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ರೈತರು, ಕೂಲಿ ಕಾರ್ಮಿಕರು ತಮ್ಮ ಮಕ್ಕಳನ್ನು ಮರಳಿ ಜೀತಕ್ಕೆ ಸೇರಿಸುತ್ತಿದ್ದಾರೆ. ಇವರ ಪಾಲಿಗಂತೂ ಶಾಲೆಗಳು ಶಾಶ್ವತವಾಗಿ ಮುಚ್ಚಿದಂತೆ. ದೇಶಾದ್ಯಂತ ಜನರನ್ನು ಕಾಡುತ್ತಿರುವ ಹಸಿವನ್ನು ಎಲ್ಲಿಯವರೆಗೆ ಸರಕಾರಕ್ಕೆ ಸರಿಪಡಿಸಲು ಸಾಧ್ಯವಿಲ್ಲವೋ, ಅಲ್ಲಿಯವರೆಗೆ ಈ ಮಕ್ಕಳನ್ನು ಜೀತದಿಂದ ಮುಕ್ತಿಗೊಳಿಸುವುದಕ್ಕೂ ಸಾಧ್ಯವಿಲ್ಲ. ಸರಕಾರ ಈ ಬಗ್ಗೆ ಆಸಕ್ತಿ ವಹಿಸಿದಂತೆಯೂ ಇಲ್ಲ. ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ಕೊಡುವುದು ಸಾಧ್ಯವಿಲ್ಲದೇ ಇರುವುದರಿಂದ, ಬಿಸಿಯೂಟದ ನೆಪದಲ್ಲಿ ಶಾಲೆಗೆ ಹೋಗುತ್ತಿದ್ದ ಭಾರೀ ಸಂಖ್ಯೆಯ ಮಕ್ಕಳು ಶಾಲೆಗೆ ಬೆನ್ನು ತಿರುಗಿಸಿದ್ದಾರೆ. ಅವರೆಲ್ಲರೂ ತುತ್ತು ಅನ್ನಕ್ಕಾಗಿ ದಿನವಿಡೀ ದುಡಿಯುವಂತಹ ಸನ್ನಿವೇಶದಲ್ಲಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಜಮೀನ್ದಾರರು, ಮೇಲ್‌ಜಾತಿಯ ಜನರು ಮತ್ತೆ ಬಡವರ ಮೇಲೆ ವಿಜೃಂಭಿಸತೊಡಗಿದ್ದಾರೆ. ಕೊಟ್ಟಷ್ಟು ದಿನಗೂಲಿಯನ್ನು ಪಡೆದುಕೊಂಡು ಹಟ್ಟಿಯಲ್ಲಿ ಕೆಲಸ ಮಾಡಬೇಕಾದ ಸ್ಥಿತಿ ರೈತರು, ಕಾರ್ಮಿಕರದ್ದಾಗಿದೆ. ಹೀಗಿರುವಾಗ, ಮಕ್ಕಳ ಶಿಕ್ಷಣದ ಕುರಿತು ಯೋಚಿಸುವುದೆಲ್ಲಿಂದ ಬಂತು? ಇವೆಲ್ಲವೂ ಅರ್ಧದಲ್ಲೇ ಶಾಲೆಯಿಂದ ವಂಚಿತರಾಗುತ್ತಿರುವ ಮಕ್ಕಳ ವಿಷಯವಾಯಿತು. ಹೊಸದಾಗಿ ಶಾಲೆಗೆ ಸೇರಬೇಕಾದ ವಿದ್ಯಾರ್ಥಿಗಳ ಸ್ಥಿತಿ ಇನ್ನಷ್ಟು ಅದ್ವಾನಗೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಹೊಸದಾಗಿ ಮಕ್ಕಳನ್ನು ಶಾಲೆಗೆ ಸೇರಿಸುವ ಬಗ್ಗೆ ಯಾರೂ ಚಿಂತೆಯನ್ನೇ ಮಾಡುತ್ತಿಲ್ಲ. ಶೈಕ್ಷಣಿಕವಾಗಿ ದೇಶ ಸಾಧಿಸಿದ ಸಾಧನೆಗಳೆಲ್ಲ ನೀರ ಮೇಲಿನ ಹೋಮದಂತಾಗಿ, ಹೊಸದಾಗಿ ಜನರಿಗೆ ಸಹಿ ಹಾಕುವುದನ್ನು ಕಲಿಸಬೇಕಾದ ಸ್ಥಿತಿ ಭವಿಷ್ಯದಲ್ಲಿ ನಿರ್ಮಾಣವಾದರೆ ಅಚ್ಚರಿಯೇನಿಲ್ಲ. ಡಿಜಿಟಲ್ ಬ್ಯಾಂಕಿಂಗ್‌ಗೆ ಸರಕಾರ ಆಸಕ್ತಿ ವಹಿಸಿದಂತೆಯೇ ಡಿಜಿಟಲ್ ಶಿಕ್ಷಣಕ್ಕೆ ಕಾಯಕಲ್ಪ ನೀಡುವ ಕುರಿತಂತೆ ತಕ್ಷಣದಿಂದ ಯೋಜನೆ ರೂಪಿಸಬೇಕು. ಆನ್‌ಲೈನ್ ಶಿಕ್ಷಣ, ಈ ದೇಶದ ಶ್ರೀಮಂತರಿಗೆ, ಉಳ್ಳವರಿಗಷ್ಟೇ ಎನ್ನುವ ಸಂದೇಶವನ್ನು ಸ್ಪಷ್ಟವಾಗಿ ನೀಡಿದೆ. ದೇಶದಲ್ಲಿ ಅಸಮಾನತೆ ಇನ್ನಷ್ಟು ಹೆಚ್ಚುವುದಕ್ಕೆ ಇದು ಕಾರಣವಾಗಲಿದೆ. ಆರ್ಥಿಕ ಅಸಮಾನತೆ ನಿಧಾನಕ್ಕೆ ದೇಶದಲ್ಲಿ ಜಾತಿ ಅಸಮಾನತೆಗೆ ಇನ್ನಷ್ಟು ಶಕ್ತಿಯನ್ನು ತುಂಬಬಹುದು. ದೇಶ ಮತ್ತೆ ಮನುವಾದಿ ಕಾಲಕ್ಕೆ ಚಲಿಸುವ ಮುನ್ಸೂಚನೆ ಇದು. ಆದುದರಿಂದ ಎಲ್ಲರಿಗೂ ಶಿಕ್ಷಣ ತಲುಪಿಸುವ ನಿಟ್ಟಿನಲ್ಲಿ ಸರಕಾರವನ್ನು ಎಚ್ಚರಿಸಲು ತಳಮಟ್ಟದಿಂದ ಆಂದೋಲನವೊಂದು ರೂಪುಗೊಳ್ಳುವ ಅಗತ್ಯವಿದೆ. ಆನ್‌ಲೈನ್‌ನಲ್ಲಿ ಎಲ್ಲರಿಗೂ ಸಮಾನವಾಗಿ ಶಿಕ್ಷಣವನ್ನು ಹಂಚುವುದು ಸಾಧ್ಯವಾಗದೇ ಇದ್ದರೆ, ಆನ್‌ಲೈನ್ ಶಿಕ್ಷಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದೇ ಭವಿಷ್ಯದ ದೃಷ್ಟಿಯಿಂದ ಒಳಿತು.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries