ನವದೆಹಲಿ: ಅತ್ಯಾಚಾರ ಪ್ರಕರಣವೊಂದರಲ್ಲಿ ಸಂತ್ರಸ್ತೆಯ ಹೆಸರನ್ನು ಉಲ್ಲೇಖಿಸಿ ಛತ್ತೀಸಗಡದ ಸೆಷನ್ಸ್ ನ್ಯಾಯಾಲಯವು ನೀಡಿರುವ ತೀರ್ಪನ್ನು ಗಮನಿಸಿರುವ ಸುಪ್ರೀಂ ಕೋರ್ಟ್, ಇಂಥ ವಿಷಯಗಳಲ್ಲಿ ತೀರ್ಪು ನೀಡುವಾಗ ಎಲ್ಲಾ ಅಧೀನ ನ್ಯಾಯಾಲಯಗಳು ಜಾಗರೂಕವಾಗಿರಬೇಕು ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಅವರ ನೇತೃತ್ವದ ನ್ಯಾಯಪೀಠವು, 'ಅತ್ಯಾಚಾರದಂಥ ಪ್ರಕರಣಗಳಲ್ಲಿ ಸಂತ್ರಸ್ತೆಯ ಹೆಸರನ್ನು ವಿಚಾರಣೆಯ ಯಾವುದೇ ಹಂತದಲ್ಲೂ ಉಲ್ಲೇಖಿಸಬಾರದು' ಎಂದು ತಿಳಿಸಿದೆ.
'ಆದರೆ, ಛತ್ತೀಸಗಡದ ಸೆಷನ್ಸ್ ನ್ಯಾಯಾಲಯದ ತೀರ್ಪಿನಲ್ಲಿ ಸಂತ್ರಸ್ತೆಯ ಹೆಸರು ಉಲ್ಲೇಖಿಸಿರುವುದನ್ನು ಅಪವಾದವೆಂದು ನಾವು ಪರಿಗಣಿಸಲಾಗದು. ಭವಿಷ್ಯದಲ್ಲಿ ಇಂಥ ಪ್ರಕರಣಗಳಲ್ಲಿ ಅಧೀನ ನ್ಯಾಯಾಲಯಗಳು ಜಾಗರೂಕತೆಯಿಂದ ನಡೆದುಕೊಳ್ಳಬೇಕು' ಎಂದೂ ನ್ಯಾಯಮೂರ್ತಿಗಳಾದ ವಿನೀತ್ ಶರಣ್ ಮತ್ತು ಎಂ.ಆರ್. ಷಾ ಅವರನ್ನೊಳಗೊಂಡ ಪೀಠವು ಅಭಿಪ್ರಾಯಪಟ್ಟಿದೆ.
'ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮತ್ತು ಇಂಥ ಪ್ರಕರಣಗಳಲ್ಲಿ ಮರಣ ಹೊಂದಿದ ಸಂತ್ರಸ್ತೆಯ ಹೆಸರು ಮತ್ತು ಗುರುತನ್ನು ಯಾವ ಹಂತದಲ್ಲೂ ಬಹಿರಂಗಪಡಿಸಲಾಗುವುದಿಲ್ಲ' ಎಂದು ಸುಪ್ರೀಂ ಕೋರ್ಟ್ 2018ರ ಡಿಸೆಂಬರ್‌ನಲ್ಲಿ ನೀಡಿದ ತೀರ್ಪಿನಲ್ಲಿ ತಿಳಿಸಿತ್ತು.