ನವದೆಹಲಿ: ದೇಶದ ವೈಜ್ಞಾನಿಕ ಸಂಶೋಧನಾ ಯೋಜನೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ ಎಂದು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವೈಜ್ಞಾನಿಕ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಬಾಹ್ಯ ಬೆಂಬಲದೊಂದಿಗೆ ಕೈಗೊಂಡ ಸಂಶೋಧನೆಗಳಿಗೆ ಸಂಬಂಧಿಸಿದಂತೆ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಇಂಥ ಸಂಶೋಧನಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಪ್ರಧಾನ ಸಂಶೋಧಕರ ಪ್ರಮಾಣ 2016-17ರ ಅವಧಿಯಲ್ಲಿ ಶೇ 24ರಷ್ಟಿತ್ತು ಇತ್ತು. ಈ ಪ್ರಮಾಣ 2018-19ರಲ್ಲಿ ಶೇ 28ಕ್ಕೆ ಹೆಚ್ಚಳವಾಗಿದೆ ಎಂದು ಬಾಹ್ಯ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಯ 2018-19ರ ಮಾಹಿತಿಕೋಶದಲ್ಲಿ ವಿವರಿಸಲಾಗಿದೆ.
ಈ ವರದಿಯ ಅನ್ವಯ ಬಾಹ್ಯ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರ 2018-19ರಲ್ಲಿ ₹ 2091.04 ಕೋಟಿ ನೆರವು ನೀಡಿದೆ. ಇದೇ ಯೋಜನೆಗೆ ಸರ್ಕಾರ 2017-18ರಲ್ಲಿ ₹2036.32 ಕೋಟಿ ನೀಡಿತ್ತು.
ಸಂಶೋಧನೆಗಾಗಿ ಕೈಗೆತ್ತಿಕೊಂಡ ಪ್ರಾಜೆಕ್ಟ್‌ಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬಂದಿದೆ. ದೇಶದಲ್ಲಿರುವ 22 ಐಐಟಿಗಳಿಗೆ 822 ಪ್ರಾಜೆಕ್ಟ್‌ಗಳನ್ನು ನೀಡಲಾಗಿದ್ದರೆ, 26 ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಗಳಿಗೆ (ಎನ್‌ಐಟಿ) 191 ಪ್ರಾಜೆಕ್ಟ್‌ಗಳನ್ನು ನೀಡಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.