ತಿರುವನಂತಪುರ: ಲಸಿಕೆ ಸ್ವೀಕರಿಸಲು ಕೊರೋನಾ ಋಣಾತ್ಮಕ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿದ ಜಿಲ್ಲಾಧಿಕಾರಿಗಳ ಕ್ರಮವನ್ನು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಬೆಂಬಲಿಸಿದ್ದಾರೆ. ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದರು. ಟಿಪಿಆರ್ ನ್ನು ಕಡಿಮೆ ಮಾಡಲು ಸ್ಥಳೀಯಾಡಳಿತ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಹೇಳಿದ್ದಾರೆ. ಕಾಸರಗೋಡಿನ ಹೊರತಾಗಿ, ಕಣ್ಣೂರಿನಲ್ಲಿ ವ್ಯಾಕ್ಸಿನೇಷನ್ ಗೆ ಕೊರೋನಾ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿದೆ.
ಲಸಿಕೆ ತೆಗೆದುಕೊಳ್ಳುವ 72 ಗಂಟೆಗಳ ಒಳಗೆ ಆರ್‍ಟಿಪಿಸಿಆರ್ ನಕಾರಾತ್ಮಕ ಪ್ರಮಾಣಪತ್ರದ ಅಗತ್ಯವಿದೆ ಎಂದು ಕಣ್ಣೂರು ಜಿಲ್ಲಾಧಿಕಾರಿ ಟಿವಿ ಸುಭಾಷ್ ಆದೇಶಿಸಿದ್ದಾರೆ. ಲಸಿಕೆಯ ಎರಡು ಪ್ರಮಾಣವನ್ನು ಪಡೆಯದವರು ಪ್ರತಿ 15 ದಿನಗಳಿಗೊಮ್ಮೆ ಕೊರೋನಾ ಆಂಟಿಜೆನ್ ಪರೀಕ್ಷೆಯನ್ನು ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುವರು. ಆದರೆ ಈ ನಿರ್ಧಾರದ ಬಗ್ಗೆ ವ್ಯಾಪಕ ಪ್ರತಿಭಟನೆಗಳು ವ್ಯಕ್ತಗೊಂಡಿದೆ. ಜಿಲ್ಲಾಧಿಕಾರಿಗಳ ಹೊಸ ಆದೇಶದಿಂದ ಲಸಿಕೆ ಉಚಿತವಾಗಿದ್ದರೂ ಪರೀಕ್ಷಿಸಲು ಹಣ ಖರ್ಚಾಗುತ್ತದೆ ಎಂಬ ಟೀಕೆಗಳು ಸಹ ವ್ಯಕ್ತವಾಗಿವೆ.
ಆದರೆ ಆರೋಗ್ಯ ಸಚಿವರು ಈ ಆದೇಶಗಳನ್ನು ಬೆಂಬಲಿಸಿದ್ದಾರೆ. ಜಿಲ್ಲೆಗಳ ಪರಿಸ್ಥಿತಿ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ಧರಿಸಬಹುದು ಎಂದರು. ಎರಡೂ ಜಿಲ್ಲೆಗಳಲ್ಲಿ ನಿನ್ನೆ ಒಂದು ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. ಕಾಸರಗೋಡು 762 ಜನರು ಮತ್ತು ಕಣ್ಣೂರು 609 ಮಂದಿ ಜನರು ನಿನ್ನೆಯ ವರದಿಯಂತೆ ಸೋಂಕಿಗೊಳಗಾಗಿದ್ದರು.