ಕಾರವಾರ; ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಮಹಾಸ್ವಾಮಿಗಳು ದೈವೈಕ್ಯರಾಗಿದ್ದಾರೆ. ಗೋವಾದಲ್ಲಿರುವ ಶ್ರೀ ಮಠದಲ್ಲಿ ಅವರು ಹರಿಪಾದ ಸೇರಿದ್ದು, ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿದ್ಯಾಧಿರಾಜತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಸೋಮವಾರ ಹರಿಪಾದ ಸೇರಿದರು. ಸೋಮವಾರ ಮಧ್ಯಾಹ್ನ ಅವರು ಇಹಲೋಕ ತ್ಯಜಿಸಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಗಂಗೊಳ್ಳಿಯ ಸೇನಾಪುರ ಆಚಾರ್ಯ ಮನೆತನದವರಾದ ಅವರು ಗಂಗೊಳ್ಳಿಯ ವೆಂಕಟರಮಣ ದೇವಾಲಯದ ಅರ್ಚಕ ಮನೆತನದವರು. ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ದಂಪತಿಯ ದ್ವಿತೀಯ ಪುತ್ರರು.
ಶ್ರೀಗಳ ಪೂರ್ವಾಶ್ರಮದ ಹೆಸರು ರಾಘವೇಂದ್ರ. ಗಂಗೊಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮ ಶಿಕ್ಷಣ ಪಡೆದು ಕುಂದಾಪುರದ ಭಂಡಾರಕರ ಕಾಲೇಜಿನಲ್ಲಿ ಓದುವಾಗ ಶ್ರೀ ದ್ವಾರಕಾನಾಥ ಶ್ರೀಗಳ ಶಿಷ್ಯತ್ವ ಹೊಂದುವ ಅವಕಾಶ ಬಂತು. ಗುರುವರ್ಯರ ಆದೇಶ ಕೇಳಿ ಖುಷಿಯಿಂದ ಸನ್ಯಾಸಾಶ್ರಮ ಸ್ವೀಕಾರಕ್ಕೆ ಒಪ್ಪಿದರು.
ಮುಂಬಯಿ ವಡಾಲಾದ ದ್ವಾರಕಾನಾಥ ಭವನದಲ್ಲಿ ಶ್ರೀ ದ್ವಾರಕಾನಾಥ ಸ್ವಾಮಿಗಳಿಂದ 9/2/1967 ರಲ್ಲಿ ಸನ್ಯಾಸ ದೀಕ್ಷೆ ಪಡೆದು ಶ್ರೀ ಮದ್ ವಿದ್ಯಾಧಿರಾಜ ತೀರ್ಥ ಸ್ವಾಮಿಗಳಾಗಿ ನಾಮಕರಣಗೊಂಡರು. ಸುಮಾರು ಐದು ದಶಕಗಳ ಸನ್ಯಾಸಾಶ್ರಮದಲ್ಲಿದ್ದ ಅವರು 1971ರಲ್ಲಿ ಗೋಕರ್ಣ ಪರ್ಥಗಾಳಿ ಮಠದ ಪೀಠಾಧಿಪತಿಗಳಾದರು.
ಶ್ರೀಗಳು ಜುಲೈ 28 ರಂದು ಪರ್ತಗಾಳಿ ಮಠದಲ್ಲಿ ಚಾತುರ್ಮಾಸ್ಯ ವ್ರತ ಸ್ವೀಕಾರ ಮಾಡುವವರಿದ್ದರು. ಶ್ರೀಗಳು ತಮ್ಮ ಅವಧಿಯಲ್ಲಿ ಪರ್ತಗಾಳಿ ಮೂಲಮಠದ ಜೊತೆಗೆ ಶಾಖಾ ಮಠಗಳ ಅಭಿವೃದ್ಧಿ ಮಾಡಿದ್ದರು. ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು. ಅವರ ನಿಧನ ಅಪಾರ ಭಕ್ತರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಸಚಿವರ ಸಂತಾಪ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 'ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಮಹಾಸ್ವಾಮಿಗಳು ನಮ್ಮನ್ನು ಅಗಲಿರುವ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ' ಎಂದು ಹೇಳಿದ್ದಾರೆ.
'ಸಮಾಜದ ಒಳಿತಿಗಾಗಿ,ಸನಾತನ ಹಿಂದು ಧರ್ಮದ ರಕ್ಷಣೆ ಹಾಗೂ ಯುವ ಪೀಳಿಗೆಯಲ್ಲಿ ಹಿಂದೂ ಧರ್ಮದ ಜಾಗೃತೆಗಾಗಿ ಹಲವಾರು ದಶಕಗಳ ಕಾಲ ಶ್ರಮಿಸಿದ ಪೂಜ್ಯರು ಜಾತಿ, ಧರ್ಮ, ಮತ ಭೇದ ಮಾಡದೇ ನೊಂದು ಬಂದ ಭಕ್ತಾದಿಗಳ ಸಂಕಷ್ಟಗಳನ್ನು ಪರಿಹರಿಸುತ್ತಿದ್ದರು ಶ್ರೀಗಳ ಅಗಲಿಕೆಯಿಂದಾಗಿ ಸಮಾಜಕ್ಕೆ ಭರಿಸಲಾಗದ ನಷ್ಟವಾಗಿದೆ' ಎಂದು ಸಂತಾಪ ಸೂಚಿಸಿದ್ದಾರೆ.