ಕಾಸರಗೋಡು: ಜಿಲ್ಲೆಯಲ್ಲಿ ಈಜು ತರಬೇತಿಗೆ ಅಗತ್ಯವಾದ ಸೌಕರ್ಯಗಳ ಅಭಾವ ನೀಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಜಾರಿಗೆ ಬರಲಿರುವ ಜಿಲ್ಲಾ ಅಕ್ವೇಟಿಕ್ ಕಾಂಪ್ಲೆಕ್ಸ್ ಹಾಗೂ ಈಜು ಕೊಳದ ನಿರ್ಮಾಣ ಕಾಮಗಾರಿಯ ಉದ್ಘಾಟನೆ ಬಂದರು ಮತ್ತು ಪ್ರಾಚ್ಯವಸ್ತು ಖಾತೆ ಸಚಿವ ಮಹಮ್ಮದ್ ದೇವರ್‍ಕೋವಿಲ್ ನಡೆಸಿದರು. ಜಿಲ್ಲೆಯಲ್ಲಿ ಸುಸಜ್ಜಿತ ಈಜುಕೊಳ ನಿರ್ಮಾಣವಾಗುವುದರೊಂದಿಗೆ ಜಿಲ್ಲೆಯ ಪ್ರತಿಭಾನ್ವಿತ ಈಜುಗಾರರಿಗೆ ಹೆಚ್ಚಿನ ಪ್ರಯೋಜನವಾಗಲಿರುವುದಾಗಿ ತಿಳಿಸಿದರು.
ಹಿಂದೂಸ್ಥಾನ್ ಏರೋನಾಟಿಕ್ಸ್ ಸಂಸ್ಥೆಯ ಸಾಮಾಜಿಕ ಚಟುವಟಿಕೆ ಅಂಗವಾಗಿ ಮೂರು ವರ್ಷ ಕಾಲಾವಧಿಯಲ್ಲಿ ತಲಾ 50ಲಕ್ಷದಂತೆ ಒಟ್ಟು ಒಂದುವರೆ ಕೋಟಿ ರೂ. ಯೋಜನೆಗೆ ಕೊಡುಗೆಯಾಗಿ ಲಭಿಸಲಿದೆ. ಆನ್‍ಲೈನ್ ಮೂಲಕ ನಡೆದ ಸಮಾರಂಭದಲ್ಲಿ ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಎಚ್.ಎ.ಎಲ್ ಹೈದರಾಬಾದ್ ಘಟಕ ಮಹಾಪ್ರಬಂಧಕ ಅರುಣ್ ಜೆ. ಸರ್ಕೇತ್ ಮುಖ್ಯ ಅತಿಥಿಯಾಗಿದ್ದರು. ಕಸರಗೋಡು ನಗರಸಭಾ ಅಧ್ಯಕ್ಷ ವಿ.ಎಂ. ಮುನೀರ್, ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು, ಜಿಲ್ಲಾ ಹಣಕಾಸು ಅಧಿಕಾರಿ ಸತೀಶನ್, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಯ ಕೊನೆಯ ಕಾರ್ಯಕ್ರಮ:
ಕಾಸರಗೋಡಿನಿಂದ ಬಡ್ತಿಯೊಂದಿಗೆ ವರ್ಗಾವಣೆಗೊಂಡು ತೆರಳುತ್ತಿರುವ ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು ಅವರ ಕೊನೆಯ ಔದ್ಯೋಗಿಕ ಕಾರ್ಯಕ್ರಮ ಇದಾಗಿತ್ತು. ಆರಂಭದಿಂದಲೂ ಜಿಲ್ಲೆಯಲ್ಲಿ ಈಜುಕೊಳ ನಿರ್ಮಾಣದ ಬಗ್ಗೆ ಹೊತ್ತಿದ್ದ ಕನಸು ನನಸಾಗುವ ದಿನ ಸಮೀಪಿಸುತ್ತಿರುವುದು ಸಂತಸ ತಂದಿದೆ. ಯೋಜನೆ ಜಾರಿಗೆ ಸಹಕರಿಸಿದ ಹಿಂದೂಸ್ಥಾನ್ ಏರೋನಾಟಿಕ್ಸ್ ಸಂಸ್ಥೆಯ ಕೊಡುಗೆ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ತಿಳಿಸಿದರು.