ತಿರುವನಂತಪುರ: ಅತ್ಯಾಚಾರ ಪ್ರಕರಣದ ಆರೋಪಿ ಜಲಂಧರ್ ಡಿಯೊಸಿಸ್‌ನ ಬಿಷಪ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂಬ ಕಾರಣಕ್ಕೆ ಫ್ರಾನ್ಸಿಸನ್ ಕ್ಲಾರಿಸ್ಟ್ ಸಭೆಯಿಂದ ಹೊರಹಾಕಲ್ಪಟ್ಟ ಕ್ರೈಸ್ತ ಸನ್ಯಾಸಿನಿ ಲೂಸಿ ಕಲಾಪುರ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು.
ತನ್ನ ಕೊಠಡಿಗೆ ವಿದ್ಯುತ್ ಸರಬರಾಜು ಕಡಿತಗೊಳಿಸಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ, ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ವಯನಾಡಿನ ಮನಂತ್ವಾಡಿ ಕಾನ್ವೆಂಟ್ ಮುಂದೆ ಶನಿವಾರ ಸಂಜೆ ಉಪವಾಸ ಸತ್ಯಾಗ್ರಹ ನಡೆಸಿದರು.
ಆದರೆ, ಶನಿವಾರ ರಾತ್ರಿ ವೇಳೆಗೆ ಪೊಲೀಸರು ಎಲೆಕ್ಟ್ರಿಷಿಯನ್ ಸಹಾಯದಿಂದ ವಿದ್ಯುತ್ ಸರಬರಾಜನ್ನು ಮರುಸ್ಥಾಪಿಸಿದರು. ಈ ಹಿನ್ನೆಲೆಯಲ್ಲಿ ಲೂಸಿ ಕಲಾಪುರ ಅವರು ಉಪವಾಸ ಸತ್ಯಾಗ್ರಹ ಹಿಂಪಡೆದರು.
ವರದಿಗಾರರಿಗೆ ಪ್ರತಿಕ್ರಿಯಿಸಿದ ಲೂಸಿ,'ನಾನು ಹಲವು ವರ್ಷಗಳಿಂದ ಇದೇ ಕಾನ್ವೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದೆ. ನನಗೆ ಬೇರಲ್ಲೂ ಹೋಗಲು ಸ್ಥಳವಿಲ್ಲ. ಹಾಗಾಗಿ ಇದೇ ಕಾನ್ವೆಂಟ್‌ನಲ್ಲಿ ಉಳಿಯಲು ನಾನು ಇಚ್ಛಿಸುತ್ತೇನೆ. ಇದಕ್ಕಾಗಿ ನಾನು ಹೋರಾಟವನ್ನು ಮುಂದುವರಿಸುತ್ತೇನೆ' ಎಂದರು.