ತಿರುವನಂತಪುರಂ: ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ದೇಶದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಸ್ವಂತ ಖರ್ಚಿನಲ್ಲಿಯೇ ಜಪಾನ್‌ಗೆ ಪ್ರವಾಸ ಹೊರಟಿದ್ದಾರೆ ಕೇರಳದ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್.
ಎಲ್ಲವೂ ಯೋಜನೆ ಪ್ರಕಾರ ನಡೆದರೆ, ಅವರು ಮುಂದಿನವಾರ ಟೊಕಿಯೊದಲ್ಲಿ ಆರಂಭವಾಗಲಿರುವ ಒಲಿಂಪಿಕ್ಸ್‌ನ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವ ಭಾರತದ ಕ್ರೀಡಾಪಟುಗಳನ್ನು ಹುರಿದುಂಬಿಸಲಿದ್ದಾರೆ.
ಜುಲೈ 23ರಿಂದ ಆಗಸ್ಟ್ 8ರವರೆಗೆ ನಡೆಯಲಿರುವ ಈ ಜಾಗತಿಕ ಕ್ರೀಡಾ ಹಬ್ಬದಲ್ಲಿ ಕೇರಳ ಸರ್ಕಾರದ ಅಧಿಕೃತ ಪ್ರತಿನಿಧಿಯಾಗಿ ಪಾಲ್ಗೊಳ್ಳಲು ಮಂಗಳವಾರ ಕೇಂದ್ರದ ಅನುಮತಿಯನ್ನು ಕೇಳಿರುವುದಾಗಿ ಸಚಿವ ಅಬ್ದುರಹಿಮಾನ್ ತಿಳಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಈಗಾಗಲೇ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್(ಐಒಎ) ನಿಂದ ಆಹ್ವಾನ ಬಂದಿರುವುದಾಗಿ ಅವರು ಹೇಳಿದ್ದಾರೆ.
'ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಜಪಾನ್‌ಗೆ ಪ್ರಯಾಣಿಸಲು ಮಂಗಳವಾರ ಕೇಂದ್ರದ ಅನುಮತಿ ಕೇಳಿದ್ದೇನೆ. ಅನಮತಿ ಸಿಕ್ಕರೆ ರಾಜ್ಯ ಸರ್ಕಾರದ ಅಧಿಕೃತ ಪ್ರತಿನಿಧಿಯಾಗಿ ಪಾಲ್ಗೊಳ್ಳುತ್ತೇನೆ. ಆದರೆ, 'ಕೋವಿಡ್-19' ಪರಿಸ್ಥಿತಿಯನ್ನು ನೋಡಿಕೊಂಡು ಪ್ರವಾಸದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ' ಎಂದು ಅಬ್ದುರಹಿಮಾನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕೇರಳದ ವಿವಿಧ ಭಾಗಗಳಿಂದ ಒಂಬತ್ತು ಕ್ರೀಡಾಪಟುಗಳು ಒಲಿಂಪಿಕ್‌ನಲ್ಲಿ ಭಾಗವಹಿಸುತ್ತಿದ್ದಾರೆ. 'ನಮ್ಮ ಕ್ರೀಡಾಪಟುಗಳನ್ನು ಬೆಂಬಲಿಸಿ, ಪ್ರೋತ್ಸಾಹಿಸುವುದು ಈ ಪ್ರವಾಸದ ಉದ್ದೇಶವಾಗಿದೆ' ಎಂದು ಸಚಿವರು ತಿಳಿಸಿದ್ದಾರೆ.
ಈ ಪ್ರವಾಸಕ್ಕೆ ಸ್ವಂತ ಹಣವನ್ನು ಖರ್ಚು ಮಾಡುತ್ತಿರುವ ಕುರಿತು ಸಚಿವರನ್ನು ಕೇಳಿದಾಗ, 'ಕೋವಿಡ್ ಸಾಂಕ್ರಾಮಿಕದ ಸಮಯವಾಗಿದ್ದು ಸರ್ಕಾರ ಆರ್ಥಿಕ ತೊಂದರೆ ಎದುರಿಸುತ್ತಿದೆ. ಹಾಗಾಗಿ, ನನ್ನ ಸ್ವಂತ ಹಣದಿಂದಲೇ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದೇನೆ' ಎಂದು ಅವರು ಪ್ರತಿಕ್ರಿಯಿಸಿದರು.
ಕೇರಳದ ವಿವಿಧ ಜಿಲ್ಲೆಗಳಿಂದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದ ಕ್ರೀಡಾಪಟಗಳೆಂದರೆ ಪಿ.ಆರ್. ಶ್ರೀಜೇಶ್, ಸಜನ್ ಪ್ರಕಾಶ್, ಎಂ.ಶ್ರೀಶಂಕರ್, ಕೆ.ಟಿ.ಇರ್ಫಾನ್, ಜಬೀರ್ ಎಂ.ಪಿ, ಮುಹಮ್ಮದ್ ಅನಸ್, ಅಮೋಜ್ ಜಾಕೋಬ್, ನಿರ್ಮಲ್ ನೋವಾ ಟಾಮ್ ಮತ್ತು ಅಲೆಕ್ಸ್ ಆಂಟನಿ.