ನವದೆಹಲಿ: ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ತಿಳಿಯಲು ರಾಷ್ಟ್ರೀಯ ಸಾಧನಾ ಸಮೀಕ್ಷೆ (ಎನ್‌ಎಎಸ್) ಅನ್ನು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ನವೆಂಬರ್ ತಿಂಗಳಿನಲ್ಲಿ ನಡೆಸಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ತಿಳಿಸಿದರು.
ಕಳೆದ ಬಾರಿ ಈ ಕಲಿಕಾ ಪ್ರಗತಿ, ಶೈಕ್ಷಣಿಕ ಗುಣಮಟ್ಟ ಸಮೀಕ್ಷೆಯನ್ನು 2017ರಲ್ಲಿ 3, 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳು ಹಾಗೂ 2018ರಲ್ಲಿ 10ನೇ ತರಗತಿಯ ವಿದ್ಯಾರ್ಥಿಗಿಗೆ ಅನ್ವಯಿಸಿ ನಡೆಸಲಾಗಿತ್ತು.
ಸಚಿವ ಪ್ರಧಾನ್ ಅವರು ಈ ಕುರಿತು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದು, ಶಾಲಾ ಶಿಕ್ಷಣದ ಗುಣಮಟ್ಟವನ್ನು ಅರಿಯಲು, ಅದರಲ್ಲೂ ಮುಖ್ಯವಾಗಿ, ಇತ್ತೀಚೆಗೆ ಆನ್‌ಲೈನ್ ತರಗತಿಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ನಡೆಸಲಾಗುತ್ತಿದೆ ಎಂದರು.
ಎನ್‌ಸಿಇಆರ್‌ಟಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಅರಿಯಲು ನಿಯಮಿತವಾಗಿ ಇಂಥ ಸಮೀಕ್ಷೆಯನ್ನು ನಡೆಸುತ್ತಿದೆ. ಕಳೆದ ಬಾರಿ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ 1.10 ಲಕ್ಷ ಶಾಲೆಗಳ 22 ಲಕ್ಷ ವಿದ್ಯಾರ್ಥಿಗಳ ಅಭಿಪ್ರಾಯ ಪಡೆಯಲಾಗಿತ್ತು ಎಂದರು.