ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ ಕಣ್ಣಿನ ಕಾರ್ನಿಯಾ ಭಾಗಕ್ಕೆ ಶಿಲೀಂಧ್ರದ ಸೋಂಕು ತಗುಲಿ ದೃಷ್ಟಿ ದೋಷವಾಗುವ ಸಮಸ್ಯೆ ಇರುತ್ತದೆ. ಇದು ಗ್ರಾಮೀಣ ಪ್ರದೇಶದ ಹೊಲದಲ್ಲಿ ಕೆಲಸ ಮಾಡುವ ರೈತರಲ್ಲಿಯೇ ಅಧಿಕವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ, ತರಕಾರಿ ಮತ್ತು ಸೊಪ್ಪುಗಳ ಮೂಲಕ ಈ ಶಿಲೀಂಧ್ರವು ಕಣ್ಣಿನ ಕಾರ್ನಿಯಾ ಭಾಗಕ್ಕೆ ತಲುಪುತ್ತದೆ. ಭಾರತದಲ್ಲಿ ದೃಷ್ಟಿದೋಷಕ್ಕೊಳಗಾದವರಲ್ಲಿ ಶೇ.50 ರಷ್ಟು ಮಂದಿಯಲ್ಲಿ ಶಿಲೀಂಧ್ರದ ಸೋಂಕು ಪತ್ತೆಯಾಗಿದೆ.
ಇದೀಗ, ಎಲ್ಲ ಮಹಿಳಾ ಸಂಶೋಧಕಿಯರನ್ನೇ ಹೊಂದಿರುವ ದೆಹಲಿಯ ಐಐಟಿ ಸಂಸ್ಥೆ, ಈ ನಿಟ್ಟಿನಲ್ಲಿ ಪರಿಹಾರದ ದಾರಿಯನ್ನು ಕಂಡುಹಿಡಿದಿದ್ದಾರೆ.
ಕಣ್ಣಿನ ಶಿಲೀಂಧ್ರ ಸಮಸ್ಯೆಗೆ ಔಷಧ ಇದೆ. ಇದಕ್ಕೆ ಅಮೆರಿಕಾದ ಔಷಧವೊಂದು ಲಭ್ಯವಿದ್ದರೂ ಅದರ ಡೋಸ್ ಕಣ್ಣಿನ ಸೂಕ್ಷ್ಮ ಭಾಗವನ್ನು ತಲುಪುವ ಬಗ್ಗೆ ಅಷ್ಟೊಂದು ಪರಿಣಾಮಕಾರಿ ಆಗಿರಲಿಲ್ಲ. ಆದರೆ ದೆಹಲಿಯ ಪ್ರೊ. ಅರ್ಚನಾ ಚುಗ್ ನೇತೃತ್ವದ ಐಐಟಿಯ ಮಹಿಳಾ ಸಂಶೋಧಕರ ತಂಡ, ಈ ನಟಾಮೈಸಿಸ್ ಎಂಬ ಔಷಧ ಪರಿಣಾಮಕಾರಿಯಾಗಿ ಸೋಂಕಿನ ಜಾಗ ತಲುಪುವ ವಿಧಾನವನ್ನು ಅನ್ವೇಷಿಸಿದೆ.
ಸದ್ಯಕ್ಕೆ ಈ ವಿಧಾನ ಪ್ರಾಣಿಗಳ ಪರೀಕ್ಷಾ ಹಂತದಲ್ಲಿ ಸಫಲವಾಗಿದೆ. ಹೆಚ್ಚಿನ ಪರೀಕ್ಷೆಗಳ ನಂತರ ಮಾನವರ ಚಿಕಿತ್ಸೆಗೂ ಇದು ಲಭ್ಯವಾಗುವ ಆಶಾಭಾವವಿದ್ದು, ಮೇಕ್ ಇನ್ ಇಂಡಿಯಾ ಆಶಯಕ್ಕೆ ತಕ್ಕಂತೆ ಭಾರತದ ಮಹಿಳಾ ಸಂಶೋಧಕರು ಸಾಧಿಸಿದ ಪ್ರಗತಿ ಇದಾಗಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ.