HEALTH TIPS

ಕಾವ್ಯಗಳು ಮನುಷ್ಯ ಜೀವನದ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತವೆ - ಡಾ.ರಾಧಾಕೃಷ್ಣ ಬೆಳ್ಳೂರು: ಸಾಹಿತ್ಯಯಾನ ಏಳರಲ್ಲಿ ಅಭಿಮತ

                                              

          ಕಾಸರಗೋಡು: ಕಾವ್ಯ ಎನ್ನುವುದು ನಿರಂತರ ಹುಡುಕಾಟ. ಅರ್ಥಸಾಧ್ಯತೆಯನ್ನು ಒಳಗೊಂಡಿರುವ ಕಾವ್ಯ ಶಾಶ್ವತವಾಗಿ ಉಳಿಯುತ್ತದೆ. ಕಲೆಯ ಮುಂದುವರಿದ ಭಾಗ ಸಾಹಿತ್ಯ. ಸಾಹಿತ್ಯ ಆನಂದವನ್ನು ನೀಡುತ್ತದೆ. ಆದರೆ ಆನಂದದ ಆಚೆಗಿನ ಹೊಸ ಹೊಸ ಅರ್ಥಸಾಧ್ಯತೆಯ  ಕಡೆಗೆ ತೆರೆದುಕೊಂಡಾಗ ಮಾತ್ರ ಸಾಹಿತ್ಯ ಬೆಳೆಯುತ್ತದೆ. ಹಾಗಾಗಿ ಆನಂದದ ಜೊತೆಗೆ ಅದರ ಆಚೆಗಿನ ಅರ್ಥಸಾಧ್ಯತೆಯೂ ಕಾವ್ಯಕ್ಕೆ ಮುಖ್ಯ ಎಂದು ಕಾಸರಗೋಡು ಸರ್ಕಾರಿ ಮಹಾವಿದ್ಯಾಲಯದ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ಅಭಿಪ್ರಾಯಪಟ್ಟರು.

             ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯ, ಕಾಸರಗೋಡಿನ ಕನ್ನಡ ವಿಭಾಗವು ಆಯೋಜಿಸಿದ ಸರಣಿ ಉಪನ್ಯಾಸ 'ಸಾಹಿತ್ಯಯಾನ'ದ ಆರನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

            'ಕಾವ್ಯದ ಓದು' ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಅವರು  'ಕನ್ನಡ ಸಾಹಿತ್ಯದ ಓದು ಬಹುಮುಖಿ ನೆಲೆಗಳಲ್ಲಿ ನಡೆದಿದೆ. ಓದುವ ಪ್ರಕ್ರಿಯೆಗೆ ಅನುಸಾರವಾಗಿ ಸಾಹಿತ್ಯದ ವಿಭಾಗೀಕರಣಗಳು ನಡೆದಿವೆ. ಇದು ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ನಡೆದ ವಿಭಾಗೀಕರಣಗಳಾಗಿವೆ. ಮನುಷ್ಯನ ಆಂತರ್ಯದ ಸುಪ್ತ ಸಂಗತಿಗಳೇ ಕಾವ್ಯಗಳಾಗಿ ಹೊರಗೆ ಪ್ರತಿಬಿಂಬಿಸಲ್ಪಡುತ್ತದೆ. ಮೂಲತಃ ಮನುಷ್ಯ ಕೆಟ್ಟವ ಅಲ್ಲ, ಸಂದರ್ಭಕ್ಕನುಗುಣವಾಗಿ ಬದಲಾಗುತ್ತಾನೆ ಅಷ್ಟೇ. ಹಾಗಾಗಿ ಕಾವ್ಯಗಳು ಮನುಷ್ಯ ಜೀವನದ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತವೆ. ಜಗತ್ತಿನ ಎಲ್ಲಾ ಧರ್ಮಗಳು ಹೇಳುವುದು ಮಾನವ ಧರ್ಮವನ್ನೇ ಆಗಿದೆ. ಎಲ್ಲರೂ ಮನುಷ್ಯ ಧರ್ಮದ ಶ್ರೇಷ್ಠತೆಯನ್ನು ಒಪ್ಪಿಕೊಂಡವರು. ಮಾನವನನ್ನು ನಿರಂತರವಾಗಿ ಶುದ್ಧೀಕರಿಸುವ ಕಾರ್ಯವನ್ನು ಕಾವ್ಯಗಳು ನಿರ್ವಹಿಸುತ್ತದೆ. ಕನ್ನಡ ಸಾಹಿತ್ಯದ ಬೇರೆ ಬೇರೆ ಕಾಲದಲ್ಲಿ ಕವಿಗಳು ಬಳಸಿದ ಪರಿಭಾಷೆಗಳು ಆತ್ಯಂತಿಕವಾಗಿ ಮಾನವನನ್ನು ಶುದ್ಧೀಕರಿಸುವ ಕಾರ್ಯವೇ ಆಗಿದೆ ಎಂದರು.

          ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ್ ಮತ್ತು ತೌಲನಿಕ ಸಾಹಿತ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ.ಜೋಸೆಫ್ ಕೊಯಿಪ್ಪಲ್ಲಿ ಜೋಸೆಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾನವ ಸಂಬಂಧವನ್ನು ಬೆಸೆಯುವ ಪ್ರಮುಖ ಮಾಧ್ಯಮ ಭಾಷೆಯಾಗಿದೆ. ಸಾಹಿತ್ಯ ಮತ್ತು ಭಾಷೆಗೆ ಗಡಿರೇಖೆಗಳಿಲ್ಲ. ಮಾನವ ಸಂಬಂಧಗಳನ್ನು ಬೆಳೆಸುವಲ್ಲಿ ಸಾಹಿತ್ಯದ ಪಾತ್ರ ಹಿರಿದಾದುದು. ಭಾಷೆಯನ್ನು ಮಾನವ ತನ್ನ ಅನುಕೂಲಕ್ಕೆ ತಕ್ಕಂತೆ ವಿಭಾಗಗಳನ್ನು ಮಾಡಿಕೊಂಡಿದ್ದಾನೆ ಅಷ್ಟೆ. ಆದರೆ ಬೇರೆ ಬೇರೆ ಕಾರಣಗಳಿಂದಾಗಿ ಪ್ರದೇಶದಿಂದ ಪ್ರದೇಶಕ್ಕೆ ಭಾಷೆ ಭಿನ್ನವಾಗಿದೆ. ಕಾಸರಗೋಡು ಹಲವು ಭಾಷೆಗಳ ಸಂಗಮ ಭೂಮಿಯಾಗಿದೆ. ಹೀಗೆ ಹಲವು ಭಾಷೆಗಳ ಜೊತೆಗಿನ ಸಂಪರ್ಕವು ಭಾಷಾ ಅಧ್ಯಯನಕ್ಕೆ   ಹೊಸ ಅವಕಾಶವನ್ನು ಒದಗಿಸುತ್ತದೆ ಎಂದರು.

         ಕೇಂದ್ರೀಯ ವಿ.ವಿ.ಯ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ.ಮೋಹನ್ ಎ.ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ಮನಸ್ಸುಗಳನ್ನು ಆಕರ್ಷಿಸುವಲ್ಲಿ ಸಾಹಿತ್ಯದ ಕೆಲಸ ಮಹತ್ತರವಾದುದು. ಮಾನವನ ದೈನಂದಿನ ವ್ಯವಹಾರಕ್ಕೆ, ಬೌದ್ಧಿಕ ವಿಕಾಸಕ್ಕೆ ಕಾವ್ಯದ ಅಧ್ಯಯನವು ಪೂರಕವಾಗಿದೆ. ವಿದ್ಯಾರ್ಥಿಗಳು ಈ ರೀತಿಯ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದರು

                   ಪ್ರಥಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಸ್ವಾತಿ ಎನ್.ಸ್ವಾಗತಿಸಿ, ಶಿಲ್ಪ ಕೆ.ವಿ ವಂದಿಸಿದರು.  ನಿವೇದಿತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries