ಮಡಿಕೇರಿ: ಕೊಡಗು ಜಿಲ್ಲೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಳೆದ ಒಂದೂವರೆ ವರ್ಷದಿಂದ ಪಿಂಡ ಪ್ರದಾನಕ್ಕೆ ಹೇರಲಾಗಿದ್ದ ನಿರ್ಬಂಧ ತೆರವುಗೊಳಿಸಲಾಗಿದ್ದು, ಇನ್ನು ಮುಂದೆ ಐದು ಮಂದಿಯೊಂದಿಗೆ ಪಿಂಡ ಪ್ರದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ತಲಕಾವೇರಿಯಲ್ಲಿ ಉಗಮವಾಗಿ ಹರಿಯುವ ಕಾವೇರಿ ನದಿಗೆ ಭಾಗಮಂಡಲದಲ್ಲಿ ಕನ್ನಿಕೆ ಮತ್ತು ಸುಜ್ಯೋತಿ ನದಿ ಸಂಗಮವಾಗುತ್ತದೆ. ಈ ಸ್ಥಳ ತ್ರಿವೇಣಿ ಸಂಗಮವಾಗಿದ್ದು, ಇಲ್ಲಿ ಪಿಂಡ ಪ್ರದಾನ ಮಾಡುವುದು ಹಿಂದಿನಿಂದಲೂ ನಡೆದು ಬಂದಿದೆ. ಕುಟುಂಬದಲ್ಲಿ ಯಾರಾದರೂ ಮೃತರಾದರೆ ನಲವತ್ತು ದಿನದೊಳಗೆ ಇಲ್ಲಿಗೆ ಬಂದು ಅಸ್ಥಿ ವಿಸರ್ಜಿಸಿ ಪಿಂಡ ಪ್ರದಾನ ಮಾಡಿ ಸ್ನಾನಗೈದು ಭಾಗಮಂಡಲದ ಭಗಂಡೇಶ್ವರ ಮತ್ತು ತಲಕಾವೇರಿಯ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿತ್ತು.
ಕೊರೊನಾ ಹಿನ್ನಲೆಯಲ್ಲಿ ಕಳೆದೊಂದು ವರ್ಷದಿಂದ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಕೆಲವರು ಪಿಂಡ ಪ್ರದಾನವನ್ನು ಮುಂದೂಡಿದ್ದರೆ, ಮತ್ತೆ ಕೆಲವರು ಮೂರ್ನಾಡು ಬಳಿಯ ಬಲಮುರಿ ಎಂಬಲ್ಲಿ ಕಾವೇರಿ ನದಿಯಲ್ಲಿ ಪಿಂಡ ಪ್ರದಾನಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ ತ್ರಿವೇಣಿ ಸಂಗಮದಲ್ಲಿ ಪಿಂಡ ಮಾಡಿದಷ್ಟು ತೃಪ್ತಿ ಇಲ್ಲಿ ಇರಲಿಲ್ಲ.
ಹಿರಿಯರಿಗೆ ತ್ರಿವೇಣಿ ಸಂಗಮದಲ್ಲಿ ಶಾಸ್ತ್ರೋಕ್ತವಾಗಿ ಪಿಂಡ ಪ್ರದಾನ ಮಾಡಿದರಷ್ಟೆ ಮೋಕ್ಷ ದೊರೆಯುವುದು ಎಂಬ ನಂಬಿಕೆ ಇರುವುದರಿಂದ ಯಾವಾಗ ಅವಕಾಶ ಮಾಡಿಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರಿದ್ದರು. ಅಲ್ಲದೆ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶ ನೀಡುವಂತೆ ಮನವಿ ಮಾಡುತ್ತಲೇ ಬಂದಿದ್ದರು.
ಜನರ ಮನವಿಗೆ ಸ್ಪಂದಿಸಿದ ಕೊಡಗು ಜಿಲ್ಲಾಡಳಿತ ಜು.5ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಐದು ಜನರು ಮೀರದಂತೆ ಪಿಂಡ ಪ್ರದಾನ ಮಾಡಲು ಅವಕಾಶ ನೀಡಿದ್ದು, ಆದರೆ ದೇವಾಲಯದ ಪೂರ್ವಾನುಮತಿ ಪಡೆದು ಪಿಂಡ ಪ್ರದಾನ ಮಾಡುವಂತೆ ಸೂಚಿಸಲಾಗಿದೆ.
ಕಕ್ಕಡ(ಆಟಿ) ತಿಂಗಳು ಆರಂಭವಾಗಲು ಇನ್ನು ಕೇವಲ ಹನ್ನೊಂದು ದಿನವಷ್ಟೆ ಉಳಿದಿದೆ. ಕಕ್ಕಡದ ಒಂದು ತಿಂಗಳ ಅವಧಿಯಲ್ಲಿ ಕೊಡಗಿನವರು ಯಾವುದೇ ಕಾರ್ಯಕ್ರಮಗಳನ್ನು ಮಾಡುವುದಿಲ್ಲ. ಬಹುತೇಕ ಕಡೆ ಈ ತಿಂಗಳಲ್ಲಿ ಯಾರಾದರೂ ಮೃತಪಟ್ಟರೆ ಅವರ ತಿಥಿ ಕರ್ಮವನ್ನು ಕೂಡ ಮುಂದೂಡಲಾಗುತ್ತದೆ. ಹೀಗಾಗಿ ಇದೀಗ ಪಿಂಡ ಪ್ರದಾನಕ್ಕೆ ಅವಕಾಶ ನೀಡಿದರೂ, ಅದರ ಪ್ರಯೋಜನ ಹೆಚ್ಚಿನವರಿಗೆ ಆಗುವುದಿಲ್ಲ. ಆದರೆ ಆಗಸ್ಟ್ ನಂತರ ಪಿಂಡಪ್ರದಾನ ಮಾಡಲು ಅನುಕೂಲವಾಗಲಿದೆ.