ಕಣ್ಣೂರು: ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಜೈಲಲ್ಲಿರುವ ಆರೋಪಿಗಳ ಮೇಲೆ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರಾದ ಶರತ್ ಲಾಲ್ ಮತ್ತು ಕೃಪೇಶ್ ಅವರ ಕೊಲೆ ಪ್ರಕರಣದ ಮೂರನೇ ಆರೋಪಿ ಕೆ.ಎಂ.ಸುರೇಶ್ ಕಣ್ಣೂರು ಕೇಂದ್ರ ಕಾರಾಗೃಹದಲ್ಲಿದ್ದು, ಆತನಿಗೆ ಹಲ್ಲೆ ನಡೆಸಲಾಗಿದೆ. ಗೂಂಡಾ ಕಾಯ್ದೆಯಡಿ ಬಂಧಿಸಲ್ಪಟ್ಟ ಎರ್ನಾಕುಳಂ ಮೂಲದ ಅಜೀಜ್ ಹಲ್ಲೆ ನಡೆಸಿರುವುದಾಗಿ ಜೈಲು ಅಧಿಕೃತರು ತಿಳಿಸಿದ್ದಾರೆ.
ಗಾಯಗೊಂಡ ಕೆ.ಎಂ.ಸುರೇಶನನ್ನು ಕಣ್ಣೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ. ವಿಯೂರ್ ಕೇಂದ್ರ ಕಾರಾಗೃಹದಲ್ಲಿದ್ದ ಸುರೇಶ್ ನನ್ನು ಎರಡು ದಿನಗಳ ಹಿಂದೆಯಷ್ಟೇ ಕಣ್ಣೂರು ಜೈಲಿಗೆ ಸ್ಥಳಾಂತರಿಸಲಾಗಿತ್ತು. ವ್ಯಾಯಾಮ ಮಾಡುವಾಗ ಸುರೇಶ್ ನ ಮೇಲೆರಗಿದ ಅಜೀಜ್ ತಲೆಗೆ ಹೊಡೆದಿರುವುದಾಗಿ ತಿಳಿದುಬಂದಿದೆ.
ಗಂಭೀರ ಗಾಯಗೊಂಡ ಸುರೇಶ್ ನ ತಲೆಗೆ 16 ಹೊಲಿಗೆಗಳನ್ನು ಹಾಕಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. 2019 ರ ಫೆಬ್ರವರಿ 17 ರ ರಾತ್ರಿ ಶರತ್ ಲಾಲ್ ಮತ್ತು ಕೃಪೇಶ್ ಅವರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.