ನವದೆಹಲಿ: ಕೋವಿಡ್ ರೋಗಿಗಳಿಗೆ ತುರ್ತು ಬಳಕೆಯ ಅನುಮೋದನೆಗಾಗಿ ಕೋವ್ಯಾಕ್ಸಿನ್ ದಾಖಲೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಕೆ ಮಾಡಲಾಗಿದೆ ಎಂದು ಭಾರತ್ ಬಯೋಟೆಕ್ ಮಾಹಿತಿ ನೀಡಿದೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಭಾರತ್ ಬಯೋಟೆಕ್ ಸಂಸ್ಥೆ, ತನ್ನ ಕೋವಿಡ್ -19 ಲಸಿಕೆ ಕೋವಾಕ್ಸಿನ್ ಅನ್ನು ತುರ್ತು ಬಳಕೆಯ ಪಟ್ಟಿಗೆ(ಇಯುಎಲ್) ಸೇರಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಈ ಕುರಿತಂತೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಅಧ್ಯಕ್ಷ ಮತ್ತು ಎಂಡಿ ಕೃಷ್ಣ ಎಲಾ ಅವರು, 'ಕೊವಾಕ್ಸಿನ್‌ನ ತುರ್ತು ಬಳಕೆ ಪಟ್ಟಿ (ಇಯುಎಲ್) ಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಜುಲೈ 9 ರವರೆಗೆ ಡಬ್ಲ್ಯುಎಚ್‌ಒಗೆ ಸಲ್ಲಿಸಲಾಗಿದೆ. ನಾವು ಶೀಘ್ರದಲ್ಲಿಯೇ ಡಬ್ಲ್ಯುಎಚ್‌ಒನಿಂದ ಇಯುಎಲ್ ಸ್ವೀಕರಿಸುತ್ತೇವೆ ಎಂಬ ನಿರೀಕ್ಷೆಯೊಂದಿಗೆ ಪರಿಶೀಲನಾ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕಳೆದ ವಾರ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ನಾಲ್ಕರಿಂದ ಆರು ವಾರಗಳಲ್ಲಿ ತುರ್ತು ಬಳಕೆಯ ಪಟ್ಟಿಯಲ್ಲಿ ಭಾರತ್ ಬಯೋಟೆಕ್‌ನ ಕೋವಿಡ್ -19 ಲಸಿಕೆ ಕೋವಾಕ್ಸಿನ್ ಬಗ್ಗೆ ಜಾಗತಿಕ ಆರೋಗ್ಯ ಸಂಸ್ಥೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದರು.
"ನಾವು ಪ್ರಸ್ತುತ ಇಯುಎಲ್‌ನೊಂದಿಗೆ ಆರು ಲಸಿಕೆಗಳನ್ನು ಅನುಮೋದಿಸಿದ್ದೇವೆ ಮತ್ತು ನಮ್ಮ ಸ್ಟ್ರಾಟೆಜಿಕ್ ಅಡ್ವೈಸರಿ ಗ್ರೂಪ್ ಆಫ್ ಎಕ್ಸ್‌ಪರ್ಟ್ಸ್ (ಎಸ್‌ಎಜಿಇ) ಯಿಂದ ಹಲವು ಲಸಿಕೆಗಳ ಶಿಫಾರಸುಗಳನ್ನು ಹೊಂದಿದ್ದೇವೆ. ನಾವು ಕೊವಾಕ್ಸಿನ್ ದತ್ತಾಂಶಗಳ ಮೇಲೂ ಗಮನ ಹರಿಸಿದ್ದು, ಭಾರತ್ ಬಯೋಟೆಕ್ ಈಗ ತಮ್ಮ ಡೇಟಾವನ್ನು ನಮ್ಮ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಪ್ರಾರಂಭಿಸಿದೆ. ದತ್ತಾಂಶ ನಮಗೆ ದೊರೆತ ಕೂಡಲೇ ಸಮಿತಿಯಿಂದ ಪರಿಶೀಲನಾ ಕಾರ್ಯ ಪ್ರಾರಂಭಿಸುತ್ತೇವೆ ಎಂದು ಸ್ವಾಮಿನಾಥನ್ ಹೇಳಿದ್ದಾರೆ.
ಡಬ್ಲ್ಯುಎಚ್‌ಒ ಮಾರ್ಗಸೂಚಿಗಳ ಪ್ರಕಾರ, ಇಯುಎಲ್ ಎನ್ನುವುದು ಸಾರ್ವಜನಿಕ ಆರೋಗ್ಯ ತುರ್ತು ಸಂದರ್ಭಗಳಲ್ಲಿ ಹೊಸ ಅಥವಾ ಪರವಾನಗಿ ಪಡೆಯದ ಉತ್ಪನ್ನಗಳನ್ನು ಬಳಸುವ ಪ್ರಕ್ರಿಯೆಯನ್ನು ಸುಗಮಗೊಳಿಸುವ ಕಾರ್ಯವಿಧಾನವಾಗಿದೆ.