ತಿರುವನಂತಪುರಂ: ಕಳೆದ ಮಂಗಳವಾರ ಸಂಜೆ ಕೊಚ್ಚಿ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೇರಳದ ಮೊದಲ ತೃತೀಯಲಿಂಗಿ ರೇಡಿಯೋ ಜಾಕಿ ಅನನ್ಯ ಕುಮಾರಿ ಅಲೆಕ್ಸ್ ಮೃತದೇಹ ಪತ್ತೆಯಾದ ಕುರಿತು ತನಿಖೆ ಆರಂಭವಾಗಿರುವ ಬೆನ್ನಲ್ಲೇ ಶುಕ್ರವಾರ ಆಕೆಯ ಫ್ರೆಂಡ್ ಜಿಜು ಶವವಾಗಿ ಪತ್ತೆಯಾಗಿದ್ದಾರೆ.
ಮರಾಡು ಪೊಲೀಸ್ ಠಾಣಾಧಿಕಾರಿಗಳ ಪ್ರಕಾರ, ಜಿಜು ಮೃತದೇಹ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡ ತನಿಖೆ ಆರಂಭಿಸಿದ್ದಾರೆ.
ಅನನ್ಯ ಸಾವಿನ ಸುದ್ದಿ ಕೇಳಿ ಜಿಜು ತುಂಬಾ ಬೇಸರಗೊಂಡಿದ್ದ ಎಂದು ತಿಳಿದುಬಂದಿದೆ. ಇನ್ನು ಅನನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗಿದೆ. ಲಿಂಗ ಪರಿವರ್ತನೆ ಚಿಕಿತ್ಸೆಯ ನಂತರ ಉಂಟಾದ ನಿರಂತರ ಆರೋಗ್ಯ ಸಮಸ್ಯೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅನನ್ಯ ಫ್ರೆಂಡ್ಸ್ ತಿಳಿಸಿದ್ದಾರೆ.
ಅನನ್ಯ ಕೇರಳದ ಕೊಲ್ಲಂ ಮೂಲದವರು. ಕೇರಳದ ಮೊದಲ ತೃತೀಯ ಲಿಂಗಿ ರೇಡಿಯೋ ಜಾಕಿ ಎಂಬ ಹೆಗ್ಗಳಿಕೆ ಹೊಂದಿದ್ದರು. ಇಷ್ಟೇ ಅಲ್ಲದೆ, ವೃತ್ತಿಪರ ಮೇಕಪ್ ಕಲಾವಿದೆ ಆಗಿದ್ದರು. ಕಳೆದ ಏಪ್ರಿಲ್ 6ರಂದು ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಹೊಸ ಪಕ್ಷದಿಂದ ಕಣಕ್ಕಿಳಿದಿದ್ದರು. ಆದರೆ, ಪಕ್ಷದೊಳಗಿನ ಭಿನ್ನಾಭಿಪ್ರಾಯದಿಂದ ನಾಮಪತ್ರ ಹಿಂಪಡೆದರು.