ಲಖನೌ: ವಿಶ್ವ ಹಿಂದೂ ಪರಿಷತ್, ಆರ್‌ಎಸ್‌ಎಸ್ ಮತ್ತು ಇತರೆ ಸಂಸ್ಥೆಗಳ ಆಕ್ಷೇಪಣೆಗಳ ಹಿಂದೆಯೇ ನೂತನ ಜನಸಂಖ್ಯೆ ನಿಯಂತ್ರಣಾ ಕಾಯ್ದೆ ಕುರಿತ ಕರಡು ಮಸೂದೆ ಪರಿಷ್ಕರಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.
ಮೂಲಗಳ ಪ್ರಕಾರ, ಸದ್ಯ ಕರಡು ಮಸೂದೆಯಲ್ಲಿ ಇರುವಂತೆ, ಏಕ ಮಗುವನ್ನು ಹೊಂದುವ ದಂಪತಿಗಳಿಗೆ ಉತ್ತೇಜನ ನೀಡುವ ಪ್ರಸ್ತಾಪವನ್ನು ಕೈಬಿಡಲು ನಿರ್ಧರಿಸಲಾಗಿದೆ.
ಕರಡು ಮಸೂದೆಯ ಪ್ರಕಾರ, ಎರಡಕ್ಕಿಂತಲೂ ಹೆಚ್ಚು ಮಕ್ಕಳಿರುವವರಿಗೆ ಸರ್ಕಾರಿ ನೌಕರಿ ಪಡೆಯುವುದರಿಂದ ಅನರ್ಹಗೊಳಿಸುವುದು, ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನಿರಾಕರಣೆ, ಎರಡೇ ಮಕ್ಕಳಿರುವ ದಂಪತಿಗೆ ಹೆಚ್ಚುವರಿಯಾಗಿ ಎರಡು ವೇತನಬಡ್ತಿ, ಮನೆ ಖರೀದಿಸಲು ಸಬ್ಸಿಡಿ ಸೌಲಭ್ಯ ಕಲ್ಪಿಸಲು ಅವಕಾಶವಿದೆ.
ಅಲ್ಲದೆ, ಒಂದೇ ಮಗುವಿದ್ದ ದಂಪತಿಗೆ ಹೆಚ್ಚುವರಿಯಾಗಿ ನಾಲ್ಕು ವೇತನ ಬಡ್ತಿ, ಪದವಿ ಹಂತದವರೆಗೂ ಉಚಿತ ಶಿಕ್ಷಣ, ಶಾಲಾ ಪ್ರವೇಶದಲ್ಲಿ ಆದ್ಯತೆ ನೀಡುವುದು ಕರಡು ಮಸೂದೆಯಲ್ಲಿ ಇತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘವು ಹೊಸ ಕರಡು ಮಸೂದೆ ಕುರಿತು ಕೆಲ ತಿದ್ದುಪಡಿಗಳಿಗೆ ಸಲಹೆ ಮಾಡಿತ್ತು.
'ಸಾರ್ವಜನಿಕರು ಮತ್ತು ಕಾನೂನು ಪರಿಣತರಿಂದ ಅನೇಕ ಸಲಹೆಗಳನ್ನು ಸ್ವೀಕರಿಸಲಾಗಿದೆ. ಅವುಗಳು ಪರಿಶೀಲನೆಯಲ್ಲಿದ್ದು, ಅಗತ್ಯ ಪರಿಷ್ಕರಣೆ ಮಾಡಲಾಗುವುದು' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.