ನವದೆಹಲಿ: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಕೊವಾಕ್ಸಿನ್ ಲಸಿಕೆಯ ಮಕ್ಕಳ ಮೇಲೆ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸುತ್ತಿದ್ದು ಸೆಪ್ಟೆಂಬರ್ ವೇಳೆಗೆ ಫಲಿತಾಂಶ ಹೊರಬೀಳಲಿದೆ.
ಈ ಬಗ್ಗೆ ಏಮ್ಸ್ ನಿರ್ದೇಶಕ ಡಾ ರಂದೀಪ್ ಗುಲೇರಿಯಾ ದೃಢಪಡಿಸಿದ್ದಾರೆ. ಮಕ್ಕಳ ಮೇಲೆ ಲಸಿಕೆಯ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದ್ದು ಫಲಿತಾಂಶ ಸಕಾರಾತ್ಮಕವಾಗಿ ಬಂದರೆ ಮಕ್ಕಳಿಗೆ ಲಸಿಕೆ ನೀಡುವ ಸಾಧ್ಯತೆಯಿದೆ ಎಂದು ಕೂಡ ಅವರು ಹೇಳಿದ್ದಾರೆ.
ಸೆಪ್ಟೆಂಬರ್ ತಿಂಗಳ ಹೊತ್ತಿಗೆ ಮಕ್ಕಳಿಗೆ ಸಹ ಹಂತ ಹಂತವಾಗಿ ಲಸಿಕೆ ಸಿಗುವಂತಾಗಬೇಕು, ಲಸಿಕೆ ನೀಡಿದ ಬಳಿಕ ಶಾಲೆಗಳನ್ನು ಪ್ರಾರಂಭಿಸಬೇಕು ಎಂದು ಎಎನ್ ಐ ಸುದ್ದಿಸಂಸ್ಥೆಗೆ ಅವರು ಪ್ರತಿಕ್ರಿಯಿಸಿದ್ದಾರೆ.
ಮಕ್ಕಳ ಮೇಲೆ ಲಸಿಕೆ ಪ್ರಯೋಗಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ, ಅವುಗಳು 12ರಿಂದ 18 ವರ್ಷಗಳು, 6 ರಿಂದ 12 ವರ್ಷಗಳು ಮತ್ತು 2ರಿಂದ 6 ವರ್ಷದೊಳಗಿನ ಮಕ್ಕಳಿಗಾಗಿದ್ದು, 2ರಿಂದ 6 ವರ್ಷದೊಳಗಿನ ಮಕ್ಕಳ ಮೇಲೆ ಪ್ರಸ್ತುತ ಲಸಿಕೆ ಪ್ರಯೋಗ ನಡೆಯುತ್ತಿದೆ. ಝೈಡಸ್ ಕ್ಯಾಡಿಲಾ ಕೊರೋನಾ ವೈರಸ್ ಲಸಿಕೆಗಾಗಿ ಮಕ್ಕಳ ಅಂಕಿಅಂಶವನ್ನು ಸೇರ್ಪಡೆ ಮಾಡಿದೆ. ಝೈಡಸ್ ಕ್ಯಾಡಿಲಾ ಲಸಿಕೆ ಮಕ್ಕಳನ್ನು ಸಹ ಸೇರಿಸಿದೆ, ತುರ್ತು ಬಳಕೆಗೆ ಈಗಾಗಲೇ ಅರ್ಜಿ ಸಲ್ಲಿಸಿದೆ ಎಂದು ಕೂಡ ಡಾ ಗುಲೇರಿಯಾ ತಿಳಿಸಿದ್ದಾರೆ.
ಝೈಡಸ್ ಕ್ಯಾಡಿಲಾದ ತುರ್ತು ಬಳಕೆಗೆ ಔಷಧಿ ನಿಯಂತ್ರಣ ಪ್ರಾಧಿಕಾರ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ)ಡಿಸಿಜಿಐ) ಅನುಮತಿ ನೀಡಲು ಇನ್ನು ಕೆಲ ದಿನಗಳು ಬೇಕಾಗಬಹುದು ಎಂದು ಎಎನ್ ಐ ಮೂಲಗಳು ತಿಳಿಸಿವೆ.