ನವದೆಹಲಿ: ದೇಶದಲ್ಲಿ ಕರೊನಾ ಎರಡನೇ ಅಲೆ ತಗ್ಗಿದೆ. ಇನ್ನು ಕೆಲವೇ ದಿನಗಳಲ್ಲಿ ಮೂರನೇ ಅಲೆ ಅಪ್ಪಳಿಸಲಿದೆ ಎನ್ನುವ ಎಚ್ಚರಿಕೆಯನ್ನೂ ಕೊಡಲಾಗಿದೆ. ಆದರೂ ಅದನ್ನು ಲೆಕ್ಕಿಸದ ಜನರು ಬೇಕಾಬಿಟ್ಟಿ ಓಡಾಡಿಕೊಂಡು, ಪ್ರವಾಸ ಮಾಡಿಕೊಂಡು ಸಮಯ ಕಳೆಯಲಾರಂಭಿಸಿದ್ದಾರೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ. ಜನರು ಕರೊನಾ ಮೂರನೇ ಅಲೆಯ ಎಚ್ಚರಿಕೆಯನ್ನು ಹವಾಮಾನ ವರದಿಯಂತೆ ಕೇಳಿ ಸುಮ್ಮನಾಗುತ್ತಿದ್ದಾರೆ ಎಂದು ಹೇಳಿದೆ.
ಮಂಗಳವಾರ ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನೀತಿ ಆಯೋಗ್ ಸದಸ್ಯ (ಆರೋಗ್ಯ) ಡಾ.ವಿ.ಕೆ ಪಾಲ್, 'ಜಾಗತಿಕವಾಗಿ, ಕೋವಿಡ್ 19ರ ಮೂರನೇ ಅಲೆಯನ್ನು ಕಾಣಲಾಗುತ್ತಿದೆ. ಭಾರತದಲ್ಲಿ ಅದು ಸಂಭವಿಸದಂತೆ ಗಂಭೀರ ಪ್ರಯತ್ನಗಳನ್ನು ಮಾಡುವಂತೆ ಜನರಿಗೆ ಮನವಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
'ಕರೊನಾ ಹೋಯಿತೆಂದು ಜನರು ಎಲ್ಲ ಮರೆತುಬಿಡಬಾರದು. ಸೋಂಕನ್ನು ನಿಯಂತ್ರಣದಲ್ಲಿಡಲು ಕಟ್ಟುನಿಟ್ಟಾಗಿ ಕೋವಿಡ್ 19 ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು. ದೇಶದ ಹಲವಾರು ಭಾಗಗಳಲ್ಲಿ ಕರೊನಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿರುವುದನ್ನು ಗಮನಿಸಲಾಗುತ್ತಿದೆ. ಇದು ನಾವು ಇಲ್ಲಿಯವರೆಗೆ ಗಳಿಸಿದ ಮಾಡಿದ ಶ್ರಮವನ್ನೆಲ್ಲ ವ್ಯರ್ಥ ಮಾಡಬಹುದು. ಜನರು ಕರೊನಾ ಮೂರನೇ ಅಲೆಯ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹವಾಮಾನ ವರದಿ ಕೇಳಿದಂತೆ ಕೇಳಿ ಸುಮ್ಮನಾಗುತ್ತಿದ್ದಾರೆ. ಅದರ ಗಂಭೀರತೆ ಮತ್ತು ನಮ್ಮ ಎಚ್ಚರಿಕೆಯನ್ನು ನಾವು ಮರೆಯುತ್ತಿದ್ದೇವೆ' ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ.