ನವದೆಹಲಿ: ಭ್ರಷ್ಟಾಚಾರ ನಿಗ್ರಹ ಸಂಬಂಧ ರಚನೆಯಾಗಿರುವ ಲೋಕಪಾಲಕ್ಕೆ ಬರುವ ದೂರುಗಳ ತನಿಖೆ ಮಾಡಲು ಕೇಂದ್ರ ಸರ್ಕಾರ ಎರಡು ವರ್ಷಗಳಿಂದ ತನಿಖಾ ನಿರ್ದೇಶಕರನ್ನು ನೇಮಕ ಮಾಡದೆ ಇರುವ ವಿಷಯ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಬಹಿರಂಗಗೊಂಡಿದೆ.
ತನಿಖಾ ನಿರ್ದೇಶಕರ ನೇಮಕ ಕುರಿತು ಪತ್ರಕರ್ತರೊಬ್ಬರು ಆರ್‌ಟಿಐನಲ್ಲಿ ಮಾಹಿತಿ ಕೋರಿದ್ದರು.
'ಕೇಂದ್ರ ಸರ್ಕಾರವು ಇನ್ನೂ ತನಿಖಾ ನಿರ್ದೇಶಕರನ್ನು ನೇಮಿಸಿಲ್ಲ. ಆದರೂ, ಲೋಕಪಾಲಕ್ಕೆ ಸಾರ್ವಜನಿಕರಿಂದ ತನಿಖೆ ನಡೆಸುವಂತೆ ಕೋರಿ ದೂರುಗಳು ಬರುತ್ತಿವೆ. ಅವುಗಳನ್ನು ಸ್ವೀಕರಿಸಲಾಗುತ್ತಿದೆ' ಎಂದು ಕೇಂದ್ರ ಜಾಗೃತ ದಳವು (ಸಿವಿಸಿ) ಆರ್‌ಟಿಐನಲ್ಲಿ ಕೋರಿದ ಮಾಹಿತಿಗೆ ಉತ್ತರ ನೀಡಿದೆ.
2019ರ ಮಾರ್ಚ್ 23ರಂದು ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಸ್ ಅವರು ಲೋಕಪಾಲ ಅಧ್ಯಕ್ಷರಾಗಿ ನೇಮಕವಾಗಿದ್ದರು. ಪ್ರಧಾನಿ ಸೇರಿದಂತೆ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತನಿಖೆ ನಡೆಸುವ ಅಧಿಕಾರವನ್ನು ಈ ಸಂಸ್ಥೆಗೆ ನೀಡಲಾಗಿದೆ.
ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ 2013ರ ಪ್ರಕಾರ ಲೋಕಪಾಲಕ್ಕೆ ತನಿಖಾ ನಿರ್ದೇಶಕರು ಇರಬೇಕು. ಈ ನಿರ್ದೇಶಕರ ಸ್ಥಾನವು ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಹುದ್ದೆಗಿಂತ ಕೆಳಗೆ ಇರಬಾರದು ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ.