ನವದೆಹಲಿ: ಭಾರತಕ್ಕೆ ಮತ್ತೊಂದು ಕೋವಿಡ್ ಲಸಿಕೆ ಲಭಿಸುವ ಸಾಧ್ಯತೆ ನಿಚ್ಚಳವಾಗಿದ್ದು, ಶೀಘ್ರದಲ್ಲೇ ಬಯೋಲಾಜಿಕಲ್ ಇ ಸಂಸ್ಥೆಯ 'ಕೊರ್ಬೆವ್ಯಾಕ್ಸ್' ಕೋವಿಡ್ ಲಸಿಕೆ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿದೆ.
ಹೈದರಾಬಾದ್ ಮೂಲದ ಔಷಧ ತಯಾರಿಕಾ ಸಂಸ್ಥೆ ಬಯೋಲಾಜಿಕಲ್ ಇ ತನ್ನ ಕೊವಿಡ್-19 ಲಸಿಕೆ 'ಕೊರ್ಬೆವಾಕ್ಸ್' ಅನ್ನು ಸೆಪ್ಟೆಂಬರ್ ಅಂತ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಬಯಾಲಾಜಿಕಲ್ ಇ ಸಂಸ್ಥೆ ಅಭಿವೃದ್ಧಿಪಡಿಸಿದ ಆರ್ ಬಿಡಿ ಪ್ರೋಟೀನ್ ಉಪ-ಘಟಕದ ಈ ಲಸಿಕೆಯು ಈಗಾಗಲೇ 1 ಮತ್ತು 2ನೇ ಹಂತದ ಕ್ಲಿನಿಕಲ್ ಪ್ರಯೋಗಗಳಲ್ಲಿ ಭರವಸೆಯ ಫಲಿತಾಂಶಗಳನ್ನು ತೋರಿಸಿದೆ. ಹೀಗಾಗಿ ಇದೀಗ 3ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಒಳಗಾಗುತ್ತಿದೆ.
ಭಾರತದಲ್ಲಿ ಮುಂದಿನ ದಿನಗಳಲ್ಲಿ 5-6 ಕೋವಿಡ್ ಲಸಿಕೆ
ಮಿಷನ್ ಕೋವಿಡ್ ಸುರಕ್ಷಾ ಯೋಜನೆಯಡಿಯಲ್ಲಿ ಭಾರತ ಸರ್ಕಾರ ಸಾಕಷ್ಟು ಲಸಿಕೆ ತಯಾರಿಕಾ ಸಂಸ್ಥೆಗಳಿಗೆ ಕೋವಿಡ್ ಲಸಿಕೆ ಉತ್ಪಾದನೆಗೆ ಅನುಮತಿ ನೀಡಿದ್ದಲ್ಲದೆ ಲಸಿಕೆ ಉತ್ಪಾದನೆಗೆ ಅಗತ್ಯ ನೆರವು ಕೂಡ ನೀಡುತ್ತಿದೆ. ಈಗಾಗಲೇ ಭಾರತದಲ್ಲಿ ಭಾರತ್ ಬಯೋಟೆಕ್ ಮತ್ತು ಸೆರಂ ಇನ್ಸ್ ಟಿಟ್ಯೂಟ್ ಸಂಸ್ಥೆಗಳು ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ಉತ್ಪಾದಿಸುತ್ತಿದ್ದು, ಇದಲ್ಲದೇ ಭಾರತದಲ್ಲಿ ಡಾ.ರೆಡ್ಡೀಸ್ ಲ್ಯಾಬ್ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಉತ್ಪಾದಿಸಲು ಮುಂಜಾದಾಗಿದೆ. ಇದರ ಜೊತೆಗೆ ಅಮೆರಿಕದ ಮೊಡೆರ್ನಾ ಲಸಿಕೆ ಮತ್ತು ಝಐಡಸ್ ಕ್ಯಾಡಿಲಾ ಸಂಸ್ಥೆ ಗಳು ತಮ್ಮ ಲಸಿಕೆಗಳ ಬಿಡುಗಡೆಗೆ ಸಿದ್ಧವಾಗಿದ್ದು, ಜೆನಿಕ್ ಲೈಫ್ ಸೈನ್ಸಸ್ ಸಂಸ್ಥೆ ಮತ್ತೊಂದು ಲಸಿಕೆ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಇದರ ನಡುವೆಯೇ ಇದೀಗ ಬಯೋಲಾಜಿಕಲ್ ಇ ಸಂಸ್ಥೆಯ 'ಕೊರ್ಬೆವ್ಯಾಕ್ಸ್' ಕೋವಿಡ್ ಲಸಿಕೆ ಕೂಡ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿದೆ.
ಇದಕ್ಕಾಗಿ ಸಂಸ್ಥೆಗೆ ಕೇಂದ್ರ ಸರ್ಕಾರ 100 ಕೋಟಿ ರೂ.ಗಳಿಗಿಂತ ಹೆಚ್ಚಿನ ಆರ್ಥಿಕ ನೆರವನ್ನು ಅನುದಾನದಡಿಯಲ್ಲಿ ನೆರವು ನೀಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.