ಪೆರ್ಲ:ಎಣ್ಮಕಜೆ ಗ್ರಾ.ಪಂ. 1ನೇ ವಾರ್ಡ್ ಸಾಯ ಬಿಜೆಪಿ ಪ್ರತಿನಿಧಿ ಮಹೇಶ್ ಭಟ್ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ಬರೆದಿರುವುದಾಗಿ ಹೇಳಲಾಗುತ್ತಿರುವ ರಾಜಿನಾಮೆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಪಕ್ಷದ ಕೆಲವು ಕಾರ್ಯಕರ್ತರು ಹಾಗೂ ತನ್ನನ್ನು ಚುನಾಯಿಸಿದ ಜನರಿಂದ ಕೆಲವೊಂದು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ ಹಾಗೂ ಇದು ತನ್ನ ವಯುಕ್ತಿಕ ನಿರ್ಧಾರ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದೇ ವೇಳೆ ರಾಜೀನಾಮೆ ಪತ್ರ ತಮಗೆ ಲಭಿಸಿಲ್ಲ ಎಂದು ಪಂಚಾಯಿತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ತಿಳಿಸಿದ್ದಾರೆ.ಮಹೇಶ್ ಭಟ್ ಅವರು ಪ್ರತಿಕ್ರಿಯೆ ನೀಡಿ ಪಕ್ಷದ ಕೆಲವೊಂದು ಕಾರ್ಯಕರ್ತರ ನಡೆ ಬೇಸರ ಮೂಡಿಸಿದ್ದು ರಾಜೀನಾಮೆ ನೀಡಲು ತೀರ್ಮಾನಿಸಿದ್ದರೂ ಬಿಜೆಪಿ ಜಿಲ್ಲಾ ಸಮಿತಿ ಹಾಗೂ ಮಂಡಲ ಸಮಿತಿಯೊಂದಿಗೆ ಚರ್ಚಿಸಿ ರಾಜೀನಾಮೆ ನಿರ್ಧಾರದಿಂದ ಹಿಂಜರಿಯುವುದಾಗಿ ತಿಳಿಸಿದ್ದಾರೆ.