ಕೊಚ್ಚಿ: 150-199 ಟನ್ ವರೆಗೆ ತೂಗುವ ಬೃಹತ್ ಮೀನು ನೀಲಿ ತಿಮಿಂಗಿಲ ಕೇರಳದ ಕಡಲ ತೀರದಲ್ಲಿ ಇದೆಯೆಂಬುದು ದೃಢವಾಗಿದೆ. ವಿಳಿಜಂನಲ್ಲಿ ಸಮುದ್ರದೊಳಗೆ ಸ್ಥಾಪಿಸಲಾಗಿದ್ದ ಹೈಡ್ರೋಫೋನ್‌ನಲ್ಲಿ ಪ್ರಸ್ತುತ ಭೂಮಿಯಲ್ಲಿರುವ ಅತಿದೊಡ್ಡ ಪ್ರಾಣಿ ಎಂದು ಗುರುತಿಸಿಕೊಂಡಿರುವ ತಿಮಿಂಗಿಲದ ಶಬ್ದಗಳನ್ನು ಗುರುತಿಸಲಾಗಿದೆ.
ನೀಲಿ ತಿಮಿಂಗಿಲವು ಅಳಿವಿನಂಚಿನಲ್ಲಿರುವ ಮೀನಿನ ಪ್ರಭೇದವಾಗಿದ್ದು, ಕೇರಳದ ಕಡಲ ತೀರವು ತಿಮಿಂಗಿಲಗಳ ವಲಸೆಯ ದಾರಿಯಾಗಿದೆಯೇ ಎಂಬುದನ್ನು ತಜ್ಞರು ಪತ್ತೆ ಮಾಡುತ್ತಿದ್ದಾರೆ. ಇತ್ತೀಚೆಗೆ ಸಮುದ್ರದಲ್ಲಿ ತಿಮಿಂಗಿಲಗಳಿರುವ ಕೆಲವು ನಿದರ್ಶನಗಳು ಸಿಕ್ಕಿದ್ದವು. ಮೀನುಗಾರರು ನೀಲಿ ತಿಮಿಂಗಿಲ ಇರುವ ಬಗ್ಗೆ ಖಚಿತ ಪಡಿಸಿದ್ದರು. ಆದರೆ ಕೇರಳ ತೀರಕ್ಕೆ ಹೊಂದಿಕೊಂಡ ಸಮುದ್ರ ಪ್ರದೇಶದಲ್ಲಿ ತಿಮಿಂಗಿಲಗಳಿರುವ ಬಗ್ಗೆ ವೈಜ್ಞಾನಿಕವಾಗಿ ದೃಢವಾಗಿರಲಿಲ್ಲ.
ಕೇರಳ ವಿಶ್ವವಿದ್ಯಾಲಯದ ಅಕ್ವಾಟಿಕ್ ಬಯಾಲಜಿ ಮೀನುಗಾರಿಕೆ ವಿಭಾಗ ಮತ್ತು ಅರೇಬಿಯನ್ ಸಮುದ್ರದ ತಿಮಿಂಗಿಲಗಳ ಜಾಲದ ಕುರಿತಾದ ಅಧ್ಯಯನ ತಂಡವು ಜಂಟಿಯಾಗಿ ಮಾರ್ಚ್ ತಿಂಗಳಲ್ಲಿ ಸಮುದ್ರದಲ್ಲಿ ಹೈಡ್ರೋಫೋನ್‌ಅನ್ನು ಅಳವಡಿಸಿದ್ದವು. ಜೂನ್ ವರೆಗೆ ಸಂಗ್ರಹಿಸಿದ ಶಬ್ದ ತರಂಗಗಳಲ್ಲಿ ನೀಲಿ ತಿಮಿಂಗಿಲ ಅಸ್ತಿತ್ವದಲ್ಲಿರುವುದನ್ನು ಪತ್ತೆ ಮಾಡಿದ್ದಾರೆ.