ಲಖನೌ: ವಾರಾಣಸಿಯಲ್ಲಿ ಜ್ಞಾನವಾಪಿ ಮಸೀದಿಯನ್ನು ನೋಡಿಕೊಳ್ಳುತ್ತಿರುವ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯು ಕಾಶಿ ವಿಶ್ವನಾಥ ದೇವಾಲಯಕ್ಕೆ ಒಂದು ಸಾವಿರ ಚದರ ಅಡಿ ಭೂಮಿಯನ್ನು ನೀಡಿದೆ.
ದೇವಾಲಯ ಮತ್ತು ಮಸೀದಿಯ ಮಾಲೀಕತ್ವದ ಬಗ್ಗೆ ಕಾಶಿ ವಿಶ್ವನಾಥ ದೇವಾಲಯ ಹಾಗೂ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ನಡುವೆ ನಡೆಯುತ್ತಿರುವ ಕಾನೂನು ಸಮರದ ಮಧ್ಯೆ ಈ ಬೆಳವಣಿಗೆಯು ಮಹತ್ವ ಪಡೆದುಕೊಂಡಿದೆ.
ವಿನಿಮಯದ ಒಪ್ಪಂದದ ಪ್ರಕಾರ, ಪಟ್ಟಣದ ಭಾನ್ಸ್ ಫಟಕ್ ಪ್ರದೇಶದಲ್ಲಿ ದೇವಾಲಯಕ್ಕೆ ಒಂದು ಸಾವಿರ ಚದರ ಅಡಿ ಭೂಮಿಯನ್ನು ವಕ್ಫ್ ಮಂಡಳಿಯು ಬಿಟ್ಟುಕೊಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗ ನೀಡಿರುವ ಭೂಮಿಯು ದೇವಾಲಯಕ್ಕೆ ಹತ್ತಿರವಿದೆ. 2019ರಲ್ಲಿ ಕಾಶಿ ವಿಶ್ವನಾಥ ದೇವಾಲಯದ ಸುಂದರೀಕರಣ ಯೋಜನೆಯನ್ನು ಉದ್ಘಾಟಿಸಲು ಬಂದಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಕಾರಿಡಾರ್‌ನ ಹಾದಿಗೆ ಈ ಸ್ಥಳವು ಅಡಚಣೆಯಾಗುವಂತಿದೆ ಎಂಬುದಾಗಿ ಹೇಳಿದ್ದರು ಎಂದು ಮೂಲಗಳು ತಿಳಿಸಿವೆ.
'ಕಾಶಿ ವಿಶ್ವನಾಥ ದೇವಾಲಯಕ್ಕೆ ನಿಯಂತ್ರಣ ಕೊಠಡಿ ಸ್ಥಾಪಿಸಲು ಭೂಮಿಯ ಅಗತ್ಯವಿತ್ತು' ಎಂದು ವಾರಾಣಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.