ಬೆಂಗಳೂರು: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ (76) ಅವರು ಸೋಮವಾರ ಬೆಳಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
1945ರಲ್ಲಿ ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಮರಾಠಿ ಸೇರಿದಂತೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಅಭಿನಯ ಮೂಲವೇ ಮನೆ ಮಾತಾಗಿದ್ದ ಜಯಂತಿ ಅವರು ಅಭಿನಯ ಶಾರದೇ ಎಂದೇ ಖ್ಯಾತಿ ಪಡೆದಿದ್ದರು.
1963ರಲ್ಲಿ ತೆರೆ ಕಂಡ ವೈ.ಅರ್. ಸ್ವಾಮಿ ನಿರ್ದೇಶನದ 'ಜೇನು ಗೂಡು' ಚಿತ್ರದ ಮೂಲಕ ಜಯಂತಿ ಅವರು ಚಿತ್ರರಂಗ ಪ್ರವೇಶಿಸಿದರು. ಒಟ್ಟು ಆರು ಭಾಷೆಯ ಚಿತ್ರಗಳಲ್ಲಿ ಜಯಂತಿ ಅಭಿನಯಿಸಿದ್ದಾರೆ. ಕನ್ನಡದದಲ್ಲಿ 190ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕಟ್ಟುಪಾಡುಗಳಿದ್ದ ಕಾಲದಲ್ಲೇ ಬೋಲ್ಡ್ ಚಿತ್ರಗಳಲ್ಲಿ ನಟಿಸುವ ಮೂಲಕ ಜಯಂತಿ ಅವರು ಎಲ್ಲರ ಹುಬ್ಬೇರಿಸಿದ್ದರು.
1965 ರಲ್ಲಿ ತೆರೆಕಂಡ 'ಮಿಸ್ ಲೀಲಾವತಿ' ಚಿತ್ರದ ಅಭಿನಯಕ್ಕಾಗಿ ಜಯಂತಿ ಅವರಿಗೆ ರಾಷ್ಟ್ರ ಪ್ರಶಸ್ತಿ ಒಲಿದು ಬಂದಿದೆ. 'ಎರಡು ಮುಖ'(1969), ಮನಸ್ಸಿನಂತೆ ಮಾಂಗಲ್ಯ'(1976),'ಧರ್ಮ ದಾರಿ ತಪ್ಪಿತು'(1981), ಮಸಣದ ಹೂವು (1985),'ಆನಂದ್ '(1986) ಚಿತ್ರಗಳ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.