ನವದೆಹಲಿ: ಈ ವರ್ಷದ ಪದ್ಮ ಪ್ರಶಸ್ತಿಗಳಿಗಾಗಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಹೆಸರನ್ನು ಶಿಫಾರಸು ಮಾಡಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಹೇಳಿದ್ದಾರೆ.
ನಿನ್ನೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, "ಈ ವರ್ಷದ ಪದ್ಮ ಪ್ರಶಸ್ತಿಗಳಿಗೆ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಹೆಸರನ್ನು ಕಳುಹಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ. ನಾವು ಅವರಿಗೆ ಕೃತಜ್ಞರಾಗಿರುತ್ತೇವೆ ಮತ್ತು ನಾವು ಅವರನ್ನು ಗೌರವಿಸಲು ಬಯಸುತ್ತೇವೆ" ಎಂದು ಹೇಳಿದರು.
"ಸಾರ್ವಜನಿಕರು ವೈದ್ಯರ ಮತ್ತು ಆರೋಗ್ಯ ಕಾರ್ಯಕರ್ತರ ಹೆಸರುಗಳನ್ನು ನಮಗೆ ತಿಳಿಸುತ್ತಾರೆ. ಜನರು ಆಗಸ್ಟ್ 15 ರೊಳಗೆ ತಮ್ಮ ಮೇಲ್‌ಗಳನ್ನು padmaawards.delhi@gmail.com ಗೆ ಕಳುಹಿಸಬಹುದು" ಎಂದು ದೆಹಲಿ ಮುಖ್ಯಮಂತ್ರಿ ಹೇಳಿದರು.
ಈ ಸಂಬಂಧ ದೆಹಲಿ ಸರ್ಕಾರವು ಸ್ಕ್ರೀನಿಂಗ್ ಕಮಿಟಿಯನ್ನು ರಚಿಸಿದ್ದು, ಮುಂದಿನ 15 ದಿನಗಳಲ್ಲಿ ಈ ಹೆಸರುಗಳನ್ನು ಪರಿಶೀಲಿಸುತ್ತದೆ ಮತ್ತು ದೆಹಲಿ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಅಂತಿಮಗೊಂಡ ಹೆಸರುಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು.