ಕಾಸರಗೋಡು: ಕೋವಿಡ್ ನಿಬಂಧನೆ ಹೆಸರಲ್ಲಿ ಅವೈಜ್ಞಾನಿಕ ರೀತಿಯಲ್ಲಿ ವ್ಯಾಪಾರಿ ಸಂಸ್ಥೆಗಳನ್ನು ಮುಚ್ಚುಗಡೆಗೊಳಿಸುವ ಸರ್ಕಾರದ ತೀರ್ಮಾನದ ವಿರುದ್ಧ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ವತಿಯಿಂದ ಜುಲೈ 6ರಂದು ರಾಜ್ಯವ್ಯಾಪಕ ಹರತಾಳ ನಡೆಯಲಿದೆ. ಶನಿವಾರ ಕೋಯಿಕ್ಕೋಡಿನಲ್ಲಿ ನಡೆದ ಸಂಘಟನೆ ರಾಜ್ಯಸಮಿತಿ ಈ ತೀರ್ಮಾನ ಕೈಗೊಂಡಿದೆ.
ಟಿ.ಪಿ.ಆರ್ ಅನ್ವಯ ಎ, ಬಿ, ಸಿ. ಡಿ ವಿಭಾಗಗಳಾಗಿ ವಿಂಗಡಿಸಿ ವ್ಯಾಪಾರಿ ಸಂಸ್ಥೆಗಳನ್ನು ತೆರೆಯಲು ಅನುಮತಿ ನೀಡಿರುವುದು ಸಂಪೂರ್ಣ ಅವೈಜ್ಞಾನಿಕವಾಘಿದೆ. ಇದರಿಂದ ಕಳೆದ ಎರಡು ತಿಂಗಳಿಗೂ ಹೆಚ್ಚು ಸಮಯದಿಂದ ಕೆಲವೊಂದು ವ್ಯಾಪಾರಿ ಸಂಸ್ಥೆಗಳು ಮುಚ್ಚುಗಡೆಗೊಳ್ಳಬೇಕಾಗಿ ಬಂದಿದೆ. ಇದೇ ಸಂದರ್ಭ ಆನ್‍ಲೈನ್ ಮೂಲಕ ಯಾವುದೇ ನಿಬಂಧನೆಗಳಿಲ್ಲದೆ ಮನೆಬಾಗಿಲಿಗೆ ಸಾಮಗ್ರಿ ವಿತರಿಸಲು ಅನುಮತಿ ನೀಡಿರುವುದು ಖಂಡನೀಯ. ಇದನ್ನು ತಡೆಯುವಂತೆಯೂ ಸಮಿತಿ ಮನವಿ ಮಾಡಿದೆ. ಅಂದು ವ್ಯಾಪಾರಿ ಸಂಸ್ಥೆಗಳನ್ನು ಮುಚ್ಚಿ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಉಪವಾಸ ಧರಣಿಯೂ ನಡೆಯಲಿದೆ. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾಸಮಿತಿ ವತಿಯಿಂದ ಪ್ರತಿಭಟನೆ ನಡೆಯಲಿದೆ. ರಾಜ್ಯದ 2500ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿರುವುದಾಗಿ ಸಮಿತಿ ಪ್ರಕಟಣೆ ತಿಳಿಸಿದೆ.