ನಾಗ್ಪುರ: ಮನಿ ಲಾಂಡರಿಂಗ್ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು ಮಾಜಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ಎರಡು ನಿವಾಸಗಳಲ್ಲಿ ಶೋಧ ನಡೆಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯದ ಎರಡು ಪ್ರತ್ಯೇಕ ತಂಡಗಳು ನಾಗ್ಪುರ ಜಿಲ್ಲೆಯಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಕಟೋಲ್ ಪಟ್ಟಣದಲ್ಲಿರುವ ದೇಶ್ಮುಖ್ ಮನೆ ಮತ್ತು ಕಟೋಲ್ ಬಳಿಯ ವಾಡ್ವಿಹಿರಾ ಗ್ರಾಮದಲ್ಲಿರುವ ಅವರ ಪೂರ್ವಜರ ಮನೆಯಲ್ಲೂ ಶೋಧಕಾರ್ಯ ನಡೆಸುತ್ತಿದ್ದಾರೆ. ಬೆಳಿಗ್ಗೆ 6 ಗಂಟೆ ಸುಮಾರಿಗೆ ಶೋಧ ಪ್ರಾರಂಭವಾಯಿತು ಎಂದರು.
ಬಹುಕೋಟಿ ಲಂಚ, ಸುಲಿಗೆ ಮತ್ತು ಮನಿ ಲಾಂಡರಿಂಗ್ ಪ್ರಕರಣದ ಬಗ್ಗೆ ಇಡಿ ತನಿಖೆ ನಡೆಸುತ್ತಿದ್ದು ಈ ಆರೋಪದ ಹಿನ್ನಲೆಯಲ್ಲಿ ಕಳೆದ ಏಪ್ರಿಲ್‌ನಲ್ಲಿ ದೇಶಮುಖ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಎನ್‌ಸಿಪಿ ಮುಖಂಡನ ವಿರುದ್ಧ ದಾಳಿ ನಡೆಸಿದ ನಂತರ ಕೇಂದ್ರ ಸಂಸ್ಥೆ ಇತ್ತೀಚೆಗೆ ದೇಶಮುಖ್ ಅವರ ವೈಯಕ್ತಿಕ ಕಾರ್ಯದರ್ಶಿ ಸಂಜೀವ್ ಪಾಲಂಡೆ ಮತ್ತು ವೈಯಕ್ತಿಕ ಸಹಾಯಕ ಕುಂದನ್ ಶಿಂಧೆ ಅವರನ್ನು ಬಂಧಿಸಿತ್ತು.