ನವದೆಹಲಿ: ಭಾರತದಲ್ಲಿ ಬೃಹತ್ ಲಸಿಕೆ ಅಭಿಯಾನ ನಡೆಯುತ್ತಿದ್ದು ಬಹಳಷ್ಟು ಮಂದಿ ಈಗಾಗಲೇ ಲಸಿಕೆ ತೆಗೆದುಕೊಂಡಿದ್ದಾರೆ. ಹಲವರು ಎರಡೂ ಡೋಸ್ ತೆಗೆದುಕೊಂಡಿದ್ದರೆ, ಇನ್ನು ಕೆಲವರು ಒಂದು ಡೋಸ್ ಮಾತ್ರ ತೆಗೆದುಕೊಂಡಿದ್ದು, ಎರಡನೇ ಡೋಸ್ ಪಡೆಯಲು ದಿನಗಣನೆಯಲ್ಲಿದ್ದಾರೆ. ಅದಾಗ್ಯೂ ಇನ್ನೂ ಲಸಿಕೆ ಪಡೆಯದವರು ಕೂಡ ಇದ್ದಾರೆ. ಅಂಥವರು ತಿಳಿದುಕೊಂಡಿರಲೇಬೇಕಾದ ಸಂಗತಿ ಇದು.
ಬಹುತೇಕ ಎಲ್ಲರಿಗೂ ತಿಳಿದಿರುವಂತೆ ಕೊರೊನಾ ಲಸಿಕೆ ಸೋಂಕು ತಗುಲದಂತೆ ಸಂಪೂರ್ಣ ತಡೆಯುವುದಿಲ್ಲ ನಿಜ. ಆದರೆ ಲಸಿಕೆ ಪಡೆದುಕೊಂಡಿದ್ದರೆ ಸೋಂಕು ತಗುಲುವ ಸಾಧ್ಯತೆ ಕಡಿಮೆ ಹಾಗೂ ಒಂದುವೇಳೆ ಸೋಂಕು ತಗುಲಿದರೂ ಪರಿಸ್ಥಿತಿ ವಿಕೋಪ ತೆರಳುವ ಇಲ್ಲವೇ ಸೋಂಕಿನಿಂದಾಗಿ ಸಾಯುವ ಸಾಧ್ಯತೆ ಅತ್ಯಂತ ಕಡಿಮೆ. ಈ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನ ನಡೆಯುತ್ತಿದ್ದು, ಅಂಥದ್ದೇ ಮತ್ತೊಂದು ಅಧ್ಯಯನದ ವರದಿ ಹೊರಬಿದ್ದಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ (ಐಸಿಎಂಆರ್-ಎನ್ಐಇ) ಈ ಅಧ್ಯಯನವನ್ನು ಕೈಗೊಂಡಿದೆ. ಇದಕ್ಕಾಗಿ ಕೊರೊನಾ ವಾರಿಯರ್ ಆಗಿದ್ದ ತಮಿಳುನಾಡು ಪೊಲೀಸರ ಆಸ್ಪತ್ರೆ ದಾಖಲಾತಿ ವಿವರಗಳನ್ನು ಆಧಾರವಾಗಿ ಬಳಸಿಕೊಳ್ಳಲಾಗಿದೆ. ಆ ಮೂಲಕ ಕರೊನಾ ಸೋಂಕಿತರು ಸಾಯುವ ಸಾಧ್ಯತೆ ಎಷ್ಟು ಎಂಬುದನ್ನು ಕಂಡುಹಿಡಿಯಲಾಗಿದೆ.
ಈ ವರ್ಷದ ಫೆ. 1ರಿಂದ ಮೇ 14ರ ನಡುವಿನ ಅವಧಿಯಲ್ಲಿನ ಅಂಕಿ-ಅಂಶಗಳನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಕೊರೊನಾ ಸೋಂಕಿಗೆ ಒಳಗಾಗಿರು ತಮಿಳುನಾಡಿನ 1,17,524 ಪೊಲೀಸರನ್ನು ಈ ಅಧ್ಯಯನಕ್ಕೆ ಪರಿಗಣಿಸಲಾಗಿದ್ದು, ಆ ಪೈಕಿ 32,792 ಮಂದಿ ಒಂದು ಡೋಸ್ ಲಸಿಕೆ, 67,673 ಮಂದಿ 2 ಡೋಸ್ ಲಸಿಕೆ ಪಡೆದಿದ್ದರೆ, 17,059 ಮಂದಿ ಲಸಿಕೆ ಪಡೆದಿರಲಿಲ್ಲ.
ಅಧ್ಯಯನಕ್ಕೆ ಪರಿಗಣಿಸಲಾಗಿದ್ದ 1.17 ಲಕ್ಷಕ್ಕೂ ಅಧಿಕ ಪೊಲೀಸರಲ್ಲಿ ಏ.13ರಿಂದ ಮೇ 14ರ ಅವಧಿಯಲ್ಲಿ 31 ಮಂದಿ ಕೊರೊನಾದಿಂದಾಗಿ ಮೃತಪಟ್ಟಿದ್ದರು. ಆ ಪೈಕಿ ನಾಲ್ವರು ಎರಡೂ ಡೋಸ್ ಲಸಿಕೆ ಪಡೆದಿದ್ದರೆ, 7 ಮಂದಿ ಒಂದು ಡೋಸ್ ಲಸಿಕೆ ಪಡೆದಿದ್ದರು. ಆದರೆ 20 ಮಂದಿ ಲಸಿಕೆ ಪಡೆದಿರಲಿಲ್ಲ. ಈ ಅಂಕಿ-ಅಂಶಗಳನ್ನು ಆಧರಿಸಿ ಅಧ್ಯಯನ ನಡೆಸಿರುವ ತಂಡ, ಕೊರೊನಾ ಸೋಂಕಿತರ ಸಾವು ಹಾಗೂ ಲಸಿಕೆ ಕುರಿತು ಒಂದು ನಿರ್ಣಯಕ್ಕೆ ಬಂದಿದೆ.
ಅದೇನೆಂದರೆ, ಕೊರೊನಾ ಸೋಂಕಿತರಲ್ಲಿ ಕೋವಿಡ್ ಲಸಿಕೆ ಪಡೆಯದವರಿಗಿಂತ ಕೋವಿಡ್ ಲಸಿಕೆ ಪಡೆದವರು ಸೋಂಕಿನಿಂದಾಗಿ ಸಾಯುವ ಸಾಧ್ಯತೆ ತೀರಾ ಕಡಿಮೆ. ಲಸಿಕೆ ಪಡೆದ ಅಥವಾ ಪಡೆಯದವರಿಗೆ ಸೋಂಕಿನಿಂದಾಗಿ ಸಾವಿರುವ ಸಾಧ್ಯತೆ ಸಾವಿರಕ್ಕೆಷ್ಟು ಎಂಬುದನ್ನು ಈ ಅಧ್ಯಯನ ತಿಳಿಸಿದೆ. ಲಸಿಕೆ ಪಡೆಯದಿದ್ದವರ ಪೈಕಿ ಸಾವಿರಕ್ಕೆ 1.17 ಹಾಗೂ ಒಂದು ಡೋಸ್ ಲಸಿಕೆ ಪಡೆದಿದ್ದವರ ಪೈಕಿ ಸಾವಿರಕ್ಕೆ 0.21 ಎಂಬಂತೆ ಪೊಲೀಸರು ಸತ್ತಿದ್ದರೆ, ಎರಡೂ ಡೋಸ್ ಲಸಿಕೆ ಪಡೆದಿದ್ದವರಲ್ಲಿ ಸಾವಿನ ಪ್ರಮಾಣ ಸಾವಿರಕ್ಕೆ 0.06 ಎಂದು ಈ ಅಧ್ಯಯನ ಹೇಳಿದೆ. ಇನ್ನು ಡೋಸ್ ಪ್ರಕಾರ, ಒಂದು ಡೋಸ್ ಪಡೆದವರಲ್ಲಿ ಸಾವಿನ ಪ್ರಮಾಣ ಸಾವಿರಕ್ಕೆ 0.18 ಇದ್ದರೆ, ಎರಡೂ ಡೋಸ್ ಪಡೆದಿದ್ದವರಲ್ಲಿ ಸಾವಿನ ಪ್ರಮಾಣ 0.05 ಇದೆ ಎಂದೂ ಅಧ್ಯಯನ ಕೈಗೊಂಡವರು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕೋವಿಡ್ ಲಸಿಕೆ ಪಡೆಯುವುದರಿಂದ ಸೋಂಕಿನಿಂದಾಗಿ ಸಾಯುವುದನ್ನು ಬಹುತೇಕ ತಡೆಯಬಹುದು ಎಂಬುದು ಈ ಅಧ್ಯಯನ ಬಹುಮುಖ್ಯ ಅಂಶ. ಒಂದು ಡೋಸ್ ಲಸಿಕೆ ಪಡೆದಿದ್ದು, ಸೋಂಕಿಗೆ ಒಳಗಾಗಿದ್ದರೆ ಅಂಥವರು ಸೋಂಕಿನಿಂದಾಗಿ ಸಾಯುವುದನ್ನು ಶೇ. 82 ಹಾಗೂ ಎರಡೂ ಡೋಸ್ ಲಸಿಕೆ ಪಡೆದೂ ಸೋಂಕಿಗೆ ಒಳಗಾಗಿದ್ದರೆ ಅಂಥವರು ಸೋಂಕಿನಿಂದಾಗಿ ಸಾಯುವುದನ್ನು ಶೇ. 95ರಷ್ಟು ತಡೆಯಬಹುದು ಎಂದು ಐಸಿಎಂಆರ್-ಎನ್ಐಇ ಅಧ್ಯಯನ ಪ್ರತಿಪಾದಿಸಿದೆ.