ನವದೆಹಲಿ: ಕೋವಿಡ್ ಬಿಕ್ಕಟ್ಟು ನಿರ್ವಹಣೆಗೆ ಹಣದ ಬಳಕೆಗಾಗಿ ಎರಡು ವರ್ಷಗಳ ಅವಧಿಗಾಗಿ ಕಳೆದ ವರ್ಷ ಸ್ಥಗಿತಗೊಳಿಸಲ್ಪಟ್ಟಿರುವ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಎಂಪಿಎಲ್‌ಎಡಿಎಸ್)ಯನ್ನು ಪುನರಾರಂಭಿಸುವಂತೆ ಮಳೆಗಾಲದ ಅಧಿವೇಶನದ ಮುನ್ನಾದಿನವಾದ ರವಿವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಸತ್ ಸದಸ್ಯರು ಆಗ್ರಹಿಸಿದರು.
ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಲ್ಲದೆ ತಾವು ತಮ್ಮ ಸ್ವಂತ ಕ್ಷೇತ್ರದಲ್ಲಿ ಶಕ್ತಿಹೀನ ಮತ್ತು ಅಸಹಾಯಕರಾಗಿದ್ದೇವೆ ಎಂದು ಸಂಸದರು ತಿಳಿಸಿದರು.
ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೈಗೆತ್ತಿಕೊಳ್ಳಲು ಒಪ್ಪಿದ ಸ್ಪೀಕರ್,ಯೋಜನೆಯ ಪುನರಾರಂಭಕ್ಕೆ ಸಮಯಾವಕಾಶ ಅಗತ್ಯವಿದೆ ಎಂದು ಹೇಳಿದರು.
ಆಧಿರ ರಂಜನ ಚೌಧುರಿ(ಕಾಂಗ್ರೆಸ್), ಸುದೀಪ್ ಬಂದೋಪಾಧ್ಯಾಯ(ಟಿಎಂಸಿ), ಟಿ.ಆರ್.ಬಾಲು(ಡಿಎಂಕೆ), ರಾಖಿ ಮಿಶ್ರಾ(ಬಿಜೆಡಿ),ರಿತೇಶ ಪಾಂಡೆ(ಬಿಎಸ್ಪಿ) ಮತ್ತು ಮಧು ರೆಡ್ಡಿ(ವೈಎಸ್‌ಆರ್ ಕಾಂಗ್ರೆಸ್) ಸೇರಿದಂತೆ ಸದನ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಮಳೆಗಾಲದ ಅಧಿವೇಶನಕ್ಕಾಗಿ ಸರಕಾರವು ಅತಿಯಾದ ಸಂಖ್ಯೆಯಲ್ಲಿ ಮಸೂದೆಗಳನ್ನು ಪಟ್ಟಿ ಮಾಡಿರುವುದರಿಂದ ತುರ್ತು ಸಾರ್ವಜನಿಕ ವಿಷಯಗಳ ಚರ್ಚೆಗೆ ತಮಗೆ ಸಾಕಷ್ಟು ಸಮಯಾವಕಾಶ ದೊರೆಯುವುದಿಲ್ಲವೆಂದೂ ಸದಸ್ಯರು ತಿಳಿಸಿದರು. ಪ್ರತಿಯೊಂದೂ ಪಕ್ಷವು ತಾನು ಬಯಸಿದ ವಿಷಯವನ್ನು ಪ್ರಸ್ತಾವಿಸಲು ಸಾಕಷ್ಟು ಅವಕಾಶ ದೊರೆಯುವಂತೆ ತಾನು ನೀಡುಕೊಳ್ಳುವುದಾಗಿ ಸ್ಪೀಕರ್ ನಾಯಕರಿಗೆ ಭರವಸೆ ನೀಡಿದರು. ಸಭೆಯ ಅಂತ್ಯದಲ್ಲಿ ನಾಯಕರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ ಪ್ರಧಾನಿ,ಸಂಸತ್ ಅಧಿವೇಶನವನ್ನು ಫಲಪ್ರದವಾಗಿಸಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಹೇಳಿದರು.
ಸಂಸತ್ತಿನ ಮಳೆಗಾಲದ ಅಧಿವೇಶನ ನಾಳೆಯಿಂದ ಆರಂಭಗೊಳ್ಳಲಿದೆ. ರವಿವಾರ ಸರಕಾರವು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರತಿಪಕ್ಷ ನಾಯಕರು ಕೃಷಿ ಮಸೂದೆಗಳು,ಬೆಲೆ ಏರಿಕೆ(ವಿಶೇಷವಾಗಿ ಪೆಟ್ರೋಲ್ ಮತ್ತು ಡೀಸೆಲ್) ಯಂತಹ ಪ್ರಮುಖ ವಿಷಯಗಳನ್ನು ಎತ್ತಿದರಲ್ಲದೆ,ನೀಟ್ನಲ್ಲಿ ಒಬಿಸಿಗಳಿಗೆ ಮೀಸಲಾತಿ ಕಲ್ಪಿಸುವಂತೆಯೂ ಆಗ್ರಹಿಸಿದರು.