ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಹಲಸಿನ ಹಣ್ಣನ್ನು ಮಳೆಗಾಲದ ಬಳಕೆಗಾಗಿ ಉಪ್ಪಿನಲ್ಲಿ ಹಾಕಿಡುವ ವಾಡಿಕೆಯಿದೆ. ಆಷಾಢದ ಜಡಿ ಮಳೆಗೆ ಬೇರಾವುದೇ ತರಕಾರಿ ಸಿಗೋದಿಲ್ಲ, ಮಳೆಗಾಲದಲ್ಲಿ ಕೆಲಸಕಾರ್ಯವಿರದೇ ಇರೋದ್ರಿಂದ ಹಲಸಿನಕಾಯಿ, ಹೆಬ್ಬೆಲಸು, ಮಾವಿನಕಾಯಿ, ಕಳಿಲೆ ಇಂತಹ ಹಲವಾರು ಪದಾರ್ಥಗಳನ್ನು ಮಳೆಗಾಲದ ಕಷ್ಟದ ದಿನಗಳಿಗಾಗಿ ಸಂಗ್ರಹ ಮಾಡಲಾಗುತ್ತಿತ್ತು.
ಉಪ್ಪಿನಲ್ಲಿ ಹಾಕಿಟ್ಟ ಈ ಹಲಸಿನಕಾಯಿಯನ್ನು ಮಲೆಗಾಲದಲ್ಲಿ ವಿವಿಧ ಭಕ್ಷ್ಯಗಳ ತಯಾರಿಕೆಗಾಗಿ ಬಳಕೆ ಮಾಡಲಾಗುತ್ತದೆ. ಅವುಗಳಲ್ಲಿ ಒಂದು ಉಪ್ಪಡ್ ಪಚ್ಚಿರ್(ತುಳುವಿನಲ್ಲಿ). ಉಪ್ಪಿರುವ ಹಲಸಿನಕಾಯಿಯ ತೊಲೆಯ ಪಲ್ಯ. ಇದು ಬಿಸಿಬಿಸಿ ಗಂಜಿ ಜೊತೆ ಸವಿಯಲು ಹೇಳಿಮಾಡಿಸಿದ ರೆಸಿಪಿ. ಇದನ್ನು ಮಾಡುವುದು ಹೇಗೆ ಬನ್ನಿ ನೋಡೋಣ.
ಉಪ್ಪಡ್ ಪಚ್ಚಿರ್ ಮಾಡಲು ಬೇಕಾಗುವ ಸಾಮಾಗ್ರಿಗಳು: 2 ಕಪ್ ಉಪ್ಪಿನಲ್ಲಿ ಹಾಕಿಟ್ಟ ಹಲಸಿನಕಾಯಿಯ ತುಂಡುಗಳು 3 ಒಣಮೆಣಸು ಕರಿಬೇವು 2 ಚಮಚ ಸಾಸಿವೆ 5 ಬೆಳ್ಳುಳ್ಳಿ ಎಸಳು 1/2 ಕಪ್ ತುರಿದ ತೆಂಗಿನಕಾಯಿ ನೆನಸಿದ ಹುಣಿಸೇಹಣ್ಣು ಸ್ವಲ್ಪ
ತಯಾರಿಸುವ ವಿಧಾನ: ಉಪ್ಪಿನಲ್ಲಿ ಹಾಕಿಟ್ಟ ಹಲಸಿನಕಾಯಿಯ ತೊಲೆಯನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿ ನಂತರ 3 ರಿಂದ 4 ಬಾರಿ ಶುದ್ಧ ನೀರಿನಲ್ಲಿ ತೊಳೆಯಿರಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆಗಳು ಮತ್ತು ಪುಡಿಮಾಡಿದ ಬೆಳ್ಳುಳ್ಳಿಯನ್ನು ಸೇರಿಸಿ. ಬೆಳ್ಳುಳ್ಳಿಯ ಸುವಾಸನೆ ಬರುವವರೆಗೆ ಫ್ರೈ ಮಾಡಿ. ಇದಕ್ಕೆ ಹಲಸಿನಕಾಯಿಯ ತುಂಡುಗಳನ್ನು ಸೇರಿಸಿ, ಹಳದಿ ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತರ ಈ ಮಿಶ್ರಣಕ್ಕೆ ಹುಣಸೆಹಣ್ಣು ಸೇರಿಸಿ, ಬೇಯಲು ಬಿಡಿ. ಕೊನೆಯದಾಗಿ ತಾಜಾ ತುರಿದ ತೆಂಗಿನಕಾಯಿ ಸೇರಿಸಿ, ಮಿಶ್ರಣ ಮಾಡಿ. ಗಮನಿಸಿ: ಉಪ್ಪು ಸೇರಿಸಬೇಡಿ. ಏಕೆಂದರೆ ಹಲಸಿನಕಾಯಿಯನ್ನು ಈಗಾಗಲೇ ಉಪ್ಪಿನಲ್ಲಿ ಹಾಕಿಟ್ಟುರುವುದರಿಂದ ಅದು ಸಾಕಷ್ಟು ಉಪ್ಪನ್ನು ಹೀರಿಕೊಂಡಿರುತ್ತದೆ. ಮತ್ತೊಮ್ಮೆ ಉಪ್ಪು ಸೇರಿಸುವ ಅಗತ್ಯವಿಲ್ಲ.
ಎನರ್ಜಿ - 43 ಕ್ಯಾ ಪ್ರೋಟೀನ್ - 1.05ಗ್ರಾ ಕಾರ್ಬೋಹೈಡ್ರೇಟ್ - 4.64ಗ್ರಾ