ಉಪ್ಪಳ: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕೃಷಿ ಸನ್ಮಾನ್ ಯೋಜನೆಯನ್ನು ಕೇರಳ ಸರ್ಕಾರ ಬುಡಮೇಲುಗೊಳಿಸುತ್ತಿದೆ ಎಂದು ಆರೋಪಿಸಿ ಕೇರಳದಾತ್ಯಂತ ಬಿಜೆಪಿ ಕರ್ಷಕ ಮೋರ್ಚಾ ಆಯೋಜಿಸುತ್ತಿರುವ ಪ್ರತಿಭಟನೆಯ ಭಾಗವಾಗಿ ಪೈವಳಿಕೆ ಪಂಚಾಯತಿ ಸಮಿತಿಯ ವತಿಯಿಂದ ಬಿಜೆಪಿ ಪೈವಳಿಕೆ ಕೃಷಿ ಭವನದ ಮುಂದೆ ಪ್ರತಿಭಟನೆ ನಡೆಯಿತು.
ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯ ಹರಿಶ್ಚಂದ್ರ ಮಂಜೇಶ್ವರ ಉದ್ಘಾಟಿಸಿದರು. ಕೇಂದ್ರ ಸರ್ಕಾರ 2019 ರಲ್ಲಿ ಕೃಷಿ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದು ಕೃಷಿಕರನ್ನು ಬೆಂಬಲಿಸುವ ನಿಟ್ಟಿನಲ್ಲಿ ಸುಮಾರು 1ಕೋಟಿ ಮೂವತ್ತೈದು ಲಕ್ಷ ಕೋಟಿ ರೂಪಾಯಿಗಳನ್ನು ಕೃಷಿಕರಿಗೆ ಮೀಸಲು ಇಟ್ಟು ಕಳೆದ 2 ವರ್ಷಗಳಲ್ಲಿ 8 ಕಂತುಗಳಾಗಿ ಕೃಷಿಕರ ಖಾತೆಗೆ ನೇರವಾಗಿ ಜಮಾವಣೆ ಮಾಡಿದೆ. ಭ್ರಷ್ಟಾಚಾರಕ್ಕೆ ಆಸ್ಪದ ನೀಡದೆ ಕೃಷಿಕರನ್ನು ಬೆಂಬಲಿಸಿದೆ. ಕೃಷಿಕರ ಏಳಿಗೆಗಾಗಿ ಕೃಷಿ ಕಾಯ್ದೆ 2020ನ್ನು ಜಾರಿಗೆ ತಂದು ಅಚಲವಾಗಿ ಸರ್ಕಾರ ಮುನ್ನಡೆಯುತ್ತಿದೆ. ಕೃಷಿ ಕಾಯ್ದೆಯ ಬೆಂಬಲಕ್ಕೆ ನಿಂತ ಸರ್ಕಾರ ಇದೀಗ ಸಾವಿರದ ಏಳನೂರಕೋಟಿ ರೂ.ಗಳ ಯೋಜನೆಗಳನ್ನು ಕೃಷಿಕರ ಸಂರಕ್ಷಣೆಗೆ ಪ್ರಧಾನಮಂತ್ರಿಯವರು ಶನಿವಾರ ಲೋಕಾರ್ಪಣೆ ಮಾಡಿದ್ದಾರೆ. ರೈತರು ಬೆಳೆದ ಬೆಳೆಗಳನ್ನು ಬೆಂಬಲ ಬೆಲೆ ಕೊಟ್ಟು ಖರೀದಿ ಮಾಡಿ ಶೈತ್ಯಾಗಾರದಲ್ಲಿ ಇರಿಸಿ ಸೂಕ್ತ ಸಮಯದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವಂತಹ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ. ಕೃಷಿ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳ ಅಪೇಕ್ಷೆಗಳನ್ನು ತಡೆಹಿಡಿದು ಕೃಷಿಕರನ್ನು ವಂಚಿಸುತ್ತಿರುವ ಕೇರಳದ ಎಲ್ ಡಿಎಫ್ ಸರ್ಕಾರದ ಧೋರಣೆಗೆ ವಿರುದ್ಧವಾಗಿ ಭಾರತೀಯ ಜನತಾ ಕರ್ಷಕ ಮೋರ್ಚಾ ಸದಾ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದೆ ಎಂದು ಹರಿಶ್ಚಂದ್ರ ಮಂಜೇಶ್ವರ ತಿಳಿಸಿದರು.
ಧರಣಿಯ ನೇತೃತ್ವವನ್ನು ಪೈವಳಿಕೆ ಪಂಚಾಯತಿ ಕರ್ಷಕ ಮೋರ್ಚಾ ಅಧ್ಯಕ್ಷ ಅನಂತಕೃಷ್ಣ ಭಟ್ ಅವರು ವಹಿಸಿದ್ದರು. ಧರಣಿಯಲ್ಲಿ ಬಿಜೆಪಿ ಪೈವಳಿಕೆ ಪಂಚಾಯತಿ ಘಟಕದ ಅಧ್ಯಕ್ಷ ಲೋಕೇಶ್ ನೋಂಡ, ಪ್ರಧಾನ ಕಾರ್ಯದರ್ಶಿ ಶ್ರೀಧರ ಬದಿಯಾರ್, ಉಪಾಧ್ಯಕ್ಷ ಸತ್ಯಶಂಕರ ಭಟ್ ಮಳಿವು, ಪಂಚಾಯತಿಯ ಮಾಜಿ ಸದಸ್ಯ ಗಣೇಶ, ಬ್ಲಾಕ್ ಪಂಚಾಯತಿ ಮಾಜಿ ಸದಸ್ಯ ಪ್ರಸಾದ್ ರೈ ಉಪಸ್ಥಿತರಿದ್ದು ಮಾತನಾಡಿದರು. ಕರ್ಷಕ ಮೋರ್ಚಾ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ, ಬಿಜೆಪಿ ಪಂಚಾಯತಿ ಕಾರ್ಯದರ್ಶಿ ಸನತ್ ಕುಮಾರ್ ವಂದಿಸಿದರು.