ತಿರುವನಂತಪುರಂ: ಡ್ರೋನ್ ದಾಳಿಯ ಬೆದರಿಕೆಯನ್ನು ಎದುರಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲು ಕೇಂದ್ರವನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಕೇರಳ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಶುಕ್ರವಾರ ಹೇಳಿದ್ದಾರೆ.
ಡ್ರೋನ್ನಿಂದ ರಕ್ಷಣಾ ವಲಯಕ್ಕೆ ಎದುರಾಗಿರುವ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಾಪಿಸಲಾಗುವ ಡ್ರೋನ್ ಸಂಶೋಧನೆ ಕೇಂದ್ರವನ್ನು ಕೇಂದ್ರ ಸರಕಾರದ ಸಹಯೋಗದೊಂದಿಗೆ ಸ್ಥಾಪಿಸುವ ಬಗ್ಗೆ ಪರಿಶೀಲಿಸಲಾಗುವುದು. ಕೇರಳ ಪೊಲೀಸರ ಸೈಬರ್ಡೋಮ್ ನೆರವು ಪಡೆಯಲಾಗುವುದು ಎಂದವರು ಆನ್ಲೈನ್ ಮೂಲಕ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇರಳ ಪೊಲೀಸ್ ಇಲಾಖೆಯ ಸೈಬರ್ಡೋಮ್, ಸೈಬರ್ ಭದ್ರತೆ ಮತ್ತು ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಸುವ ತಾಂತ್ರಿಕ ಸಂಶೋಧನಾ ಕೇಂದ್ರವಾಗಿದೆ. ರಾಜ್ಯದಲ್ಲಿ ಚಿನ್ನ ಕಳ್ಳಸಾಗಾಣಿಕೆ ತಂಡವನ್ನು ಮಟ್ಟಹಾಕಲು ವಿಶೇಷ ತಂಡವೊಂದನ್ನು ರಚಿಸಲಾಗುವುದು ಮತ್ತು ಸಂಘಟಿತ ಅಪರಾಧ ಕೃತ್ಯವನ್ನು ತಡೆಯಲು ಮಹಾರಾಷ್ಟ್ರದಲ್ಲಿರುವ 'ಮೋಕಾ' ಕಾಯ್ದೆಯ ರೀತಿಯ ಕಠಿಣ ಕಾಯ್ದೆ ರೂಪಿಸುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದ ಪೊಲೀಸ್ ಪಡೆಯ ಹಿತಚಿಂತನೆ ತನ್ನ ಪ್ರಥಮ ಆದ್ಯತೆಯಾಗಿದೆ ಎಂದವರು ಇದೇ ಸಂದರ್ಭ ಹೇಳಿದ್ದಾರೆ.