ಕಾಸರಗೋಡು: ವಿನಾಶದ ಹಾದಿಯಲ್ಲಿರುವ ಖಾಸಗಿ ಬಸ್ ಉದ್ದಿಮೆಯನ್ನು ಸಂರಕ್ಷಿಸುವಂತೆ ಆಗ್ರಹಿಸಿ ಕೇರಳ ರಾಜ್ಯ ಖಾಸಗಿ ಬಸ್ ಓಪರೇಟರ್ಸ್ ಅಸೋಸಿಯೇಶನ್ ರಾಜ್ಯವ್ಯಾಪಕವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದನ್ವಯ ಕಾಸರಗೋಡು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಮಂಗಳವಾರ ಉಪವಾಸ ಮುಷ್ಕರ ನಡೆಯಿತು.
ಮಂಜೇಶ್ವರ, ಕಾಸರಗೋಡು ಹಾಗೂ ಚೆರ್ವತ್ತೂರು ಕೇಂದ್ರದಲ್ಲಿ ಮುಷ್ಕರ ಆಯೋಜಿಸಲಾಗಿತ್ತು. ಕೇರಳ ಸರ್ಕಾರಕ್ಕೆ ವಾರ್ಷಿಕ 1500ಕೋಟಿ ರೂ. ಗೂ ಹೆಚ್ಚಿನ ಆದಾಯ ಗಳಿಸಿಕೊಡುತ್ತಿರುವ ಖಾಸಗಿ ಬಸ್ ಉದ್ದಿಮೆಯ ಸಂರಕ್ಷಣೆಗೆ ಸರ್ಕಾರ ತಕ್ಷಣ ಮುಂದಾಗಬೇಕು ಎಂಬುದಾಗಿ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಕಾಸರಗೋಡು ನಗರದಲ್ಲಿ ನಡೆದ ಸಮಾರಂಭದಲ್ಲಿ ವ್ಯಾಪಾರಿ ವಯವಸಾಯಿ ಏಕೋಪನಾ ಸಮಿತಿ ಜಿಲ್ಲಾ ಅಧ್ಯಕ್ಷ ಕೆ.ಎಂ ಅಹಮ್ಮದ್ ಶೆರೀಫ್ ಉದ್ಘಾಟಿಸಿದರು. ಫೆಡರೇಶನ್ ಜಿಲ್ಲಾಧ್ಯಕ್ಷ ಎಂ.ಎ ಅಬ್ದುಲ್ಲ ಅಧ್ಯಕ್ಷತೆ ವಹಿಸಿದ್ದರು. ಕೆ. ಗಿರೀಶ್, ರಾಧಾಕೃಷ್ಣನ್, ಪಿ.ಎ ಮಹಮ್ಮದ್, ಶರೀಫ್ ಕೊಡವಂಜಿ ಉಪಸ್ಥಿತರಿದ್ದರು.