ತಿರುವನಂತಪುರ: ಪತ್ರಕರ್ತನ ಕೊಲೆ ಪ್ರಕರಣದ ಮುಖ್ಯ ಆರೋಪಿ, ವಿವಾದಿತ ಐಎಎಸ್ ಅಧಿಕಾರಿ ಡಾ. ಶ್ರೀರಾಮ್ ವೆಂಕಟರಮಣನ್ ಅವರಿಗೆ ಆರೋಗ್ಯ ಇಲಾಖೆಯಲ್ಲಿ ಹೊಸ ಜವಾಬ್ದಾರಿ ನೀಡಲಾಗಿದೆ. ಕೋವಿಡ್ ಡೇಟಾ ನಿರ್ವಹಣೆಗೆ ನೋಡಲ್ ಅಧಿಕಾರಿಯಾಗಿ ಅವರನ್ನು ನೇಮಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಆದೇಶ ಹೊರಡಿಸಿದೆ.
ಆದೇಶ ಹೊರಡಿಸುವುದರೊಂದಿಗೆ, ಕೋವಿಡ್ ದತ್ತಾಂಶ ಸಂಗ್ರಹಣೆಯನ್ನು ರಾಜ್ಯ ಮಟ್ಟದಲ್ಲಿ ಸಂಯೋಜಿಸುವ ಜವಾಬ್ದಾರಿಯನ್ನು ವೆಂಕಟರಮಣನ್ ನಿರ್ವಹಿಸಲಿದ್ದಾರೆ. ರಾಜ್ಯದ ಕೋವಿಡ್ ರೋಗಿಗಳ ಸಂಖ್ಯೆ, ಆಮ್ಲಜನಕ ಹಾಸಿಗೆಗಳ ಮಾಹಿತಿ ಮತ್ತು ಆಸ್ಪತ್ರೆಗಳಲ್ಲಿನ ವೆಂಟಿಲೇಟರ್ ಸೌಲಭ್ಯಗಳನ್ನು ಪ್ರತಿ ವಾರ ವಿಶ್ಲೇಷಿಸುವುದು ಮುಖ್ಯ ಕಾರ್ಯವಾಗಿದೆ.
ಕೋವಿಡ್ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಪರಿಶೀಲಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ವ್ಯವಸ್ಥೆಗಳನ್ನು ಇನ್ನು ವೆಂಕಟರಮಣನ್ ನಿಯಂತ್ರಿಸುವರು. ಕೋವಿಡ್‍ನ ಮೂರನೇ ಅಲೆಯ ಸಂಭವನೀಯತೆಯ ಎಚ್ಚರಿಕೆಗಳ ಹಿನ್ನೆಲೆಯಲ್ಲಿ ವೆಂಕಟರಮನ್‍ರ ನೇಮಕಾತಿ ವಿಶೇಷವಾಗಿದೆ.
ಶ್ರೀರಾಮ್ ವೆಂಕಟರಮಣನ್ 2019 ಜೂ.3 ರಂದು ಓಡಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಪತ್ರಕರ್ತ ಕೆ.ಎಂ.ಬಶೀರ್ ಮೃತರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ವೆಂಕಟರಮಣನ್ 2020 ರ ಮಾರ್ಚ್‍ನಲ್ಲಿ ಮತ್ತೆ ಸರ್ಕಾರಿ ಸೇವೆಗೆ ನಿಯೋಜನೆಗೊಂಡಿದ್ದರು.
ಶ್ರೀರಾಮ್ ವೆಂಕಟರಮಣನ್ ಅವರು ತನ್ನನ್ನು ಸರ್ಕಾರಿ ಸೇವೆಗೆ ಮರಳಿ ಸೇರ್ಪಡೆಗೊಳಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿಯ ತನಿಖಾ ವರದಿಯನ್ನು ಆಧರಿಸಿ ಮರಳಿ ಸೇವೆಗೆ ಅನುಮತಿಸಲಾಗಿದೆ. ಅವರು ಸೇವೆಗೆ ಮರಳಿದ ಬಳಿಕ ವಿವಾದ ಮತ್ತು ಆರೋಪಗಳಿಂದ ಮುಕ್ತರಾದರು.