ಕಾಸರಗೋಡು: ಭ್ರಷ್ಟಾಚಾರ ವಿರುದ್ಧ ಕಂದಾಯ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಕಂದಾಯ ಖಾತೆ ಸಚಿವ ವಕೀಲ ಕೆ. ರಾಜನ್ ತಿಳಿಸಿದ್ದಾರೆ. ಅವರು ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ಗುರುವಾರ ನಡೆದ ಮೀಟ್ ದಿ ಪ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಂದಾಯ ಇಲಾಖೆಗೆ ಜನರು ನೀಡುವ ದೂರು ಯಾ ಅರ್ಜಿಗಳ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಕಂದಾಯ ಸೆಕ್ರೆಟೇರಿಯೆಟ್ ಕಾರ್ಯಾಚರಿಸಲಿದ್ದು, ಏಳು ಪ್ರಮುಖ ಇಲಾಖೆಗಳ ಅಧಿಕಾರಿಗಳು ಈ ಸಮಿತಿಯಲ್ಲಿರಲಿದ್ದಾರೆ. ವಾರದ ಪ್ರತಿ ಬುಧವಾರ ಸಚಿವರ ಉಪಸ್ಥಿತಿಯಲ್ಲಿ ಸಮಿತಿ ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಲಾಗುವುದು. ಕಂದಾಯ ಇಲಾಖೆಯಲ್ಲಿ ತೆರವಾಗಲಿರುವ ಹುದ್ದೆಗಳಿಗೆ ಶೀಘ್ರ ನೇಮಕಾತಿ ನಡೆಸಲಾಗುವುದು. ಕಂದಾಯ ಇಲಾಖೆಗೆ ಅಗತ್ಯ ಕಟ್ಟಡಗಳ ನಿರ್ಮಾಣ ಮಾಡುವುದರ ಜತೆಗೆ ಗ್ರೂಪ್ ವಿಲ್ಲೇಜ್‍ಗಳನ್ನು ವಿಭಜಿಸಿ ಪ್ರತ್ಯೇಕ ಕಚೇರಿ ನಿರ್ಮಿಸಲಾಗುವುದು. ಇಲಾಖೆಯಲ್ಲಿ ಭ್ರಷ್ಟಾಚಾರಿಗಳ ಪತ್ತೆಗೆ ಕಂದಾಯ ವಿಜಿಲೆನ್ಸ್ ರಚಿಸಲಾಗುವುದು ಎಂದೂ ತಿಳಿಸಿದರು. ಸಿಪಿಐ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಗೋವಿಂದನ್ ಪಳ್ಳಿಕ್ಕಾಪಿಲ್ ಉಪಸ್ಥಿತರಿದ್ದರು.