ಅಹಮದಾಬಾದ್: 'ಗುಜರಾತ್‌ನ ಅಹಮದಾಬಾದ್ ನಗರದ ಹೊರವಲಯದಲ್ಲಿರುವ ಕೊಠಡಿಯೊಂದರಲ್ಲಿ ಅನಿಲ ಸೋರಿಕೆಯಾಗಿ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಸಂಭವಿಸಿದ್ದ ಅವಘಡದಲ್ಲಿ ಗಾಯಗೊಂಡಿದ್ದವರ ಪೈಕಿ ಏಳು ಮಂದಿ ಮೃತಪಟ್ಟಿದ್ಧಾರೆ' ಎಂದು ಪೊಲೀಸರು ತಿಳಿಸಿದರು.
'ಈ ಘಟನೆ ಗುರುವಾರ ರಾತ್ರಿ (ಜು.20) ನಡೆದಿದೆ. ಈ ಅವಘಡದಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬದವರು ಸೇರಿ 10 ಜನರಿಗೆ ಗಾಯಗಳಾಗಿದ್ದವು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಏಳು ಜನರು ಮೃತಪಟ್ಟಿದ್ದಾರೆ' ಎಂದು ಅಸ್ಲಾಲಿ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಎಸ್.ಎಸ್ ಗಾಮೆಟಿ ಶುಕ್ರವಾರ ತಿಳಿಸಿದರು.
ಮೃತ ಕಾರ್ಮಿಕರು ಮಧ್ಯಪ್ರದೇಶದ ಗುನಾ ಜಿಲ್ಲೆಯ ಮಧುಸೂದನಗಢದವರು.
'ಕಾರ್ಖಾನೆಯೊಂದರ ಕೆಲವು ಕಾರ್ಮಿಕರು ಮತ್ತು ಅವರ ಕುಟುಂಬದವರು ಸಣ್ಣ ಕೊಠಡಿಯೊಂದರಲ್ಲಿ ಮಲಗಿದ್ದರು. ಈ ವೇಳೆ ಎಲ್‌ಪಿಜಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿದೆ. ಈ ಬಗ್ಗೆ ಎಚ್ಚರಿಕೆ ನೀಡಲು ನೆರೆ ಮನೆಯವರು ಬಾಗಿಲು ತಟ್ಟಿದ್ಧಾರೆ. ಈ ವೇಳೆ ಕಾರ್ಮಿಕರು ಲೈಟ್ ಸ್ವಿಚ್ ಆನ್ ಮಾಡಿದ್ದರಿಂದ ಅನಿಲ ತುಂಬಿದ ಕೊಠಡಿಯಲ್ಲಿ ಸ್ಪೋಟ ಸಂಭವಿಸಿದೆ ' ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪರಿಹಾರ ಘೋಷಣೆ: ಗುಜರಾತ್‌ನ ಅಹಮದಾಬಾದ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟದಲ್ಲಿ ಸಾವಿಗೀಡಾದ ಕಾರ್ಮಿಕರು ಮಧ್ಯಪ್ರದೇಶ ಮೂಲದವರು. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮೃತರ ಕುಟುಂಬಗಳಿಗೆ ತಲಾ ₹4 ಲಕ್ಷ ಪರಿಹಾರ ಧನ ಘೋಷಿಸಿದ್ದಾರೆ.
'ಈ ಅವಘಡದಲ್ಲಿ ಮೃತಪಟ್ಟವರು ಮಧ್ಯಪ್ರದೇಶದ ಗುನಾ ಜಿಲ್ಲೆಯ ಮಧುಸೂದನಗಢದ ನಿವಾಸಿಗಳು' ಎಂದು ಮಧ್ಯಪ್ರದೇಶ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.
ಗಾಯಾಳುಗಳಿಗೆ ತಲಾ ₹ 2 ಲಕ್ಷ ಪರಿಹಾರ ಧನ ಘೋಷಿಸಿದ್ದಾರೆ. ಅಲ್ಲದೆ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು' ಎಂದು ಮುಖ್ಯಮಂತ್ರಿ ಕಚೇರಿ ಹೇಳಿದೆ.