ಹೈದರಾಬಾದ್: ದೇಶಿಯವಾಗಿ ತಯಾರಿಸಿದ ರಷ್ಯಾದ ಕೋವಿಡ್ -19 ಲಸಿಕೆ ಸ್ಪುಟ್ನಿಕ್-ವಿ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಲಭ್ಯವಾಗಲಿದೆ ಎಂದು 'ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಲಿಮಿಟೆಡ್' ನಿರೀಕ್ಷಿಸಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ರಷ್ಯಾದಲ್ಲಿ ಕೋವಿಡ್ ಪ್ರಕರಣಗಳು ಹಠಾತ್ತನೆ ಹೆಚ್ಚಾಗಿವೆ. ಹೀಗಾಗಿ ಸ್ಪುಟ್ನಿಕ್-ವಿ ಲಸಿಕೆಗಳು ಬರುವುದು ವಿಳಂಬವಾಗುತ್ತಿದೆ. ಆಗಸ್ಟ್ ಅಂತ್ಯದ ವೇಳೆಗೆ ಪರಿಸ್ಥಿತಿ ಸರಿಹೋಗಲಿದೆ ಎಂದು ರೆಡ್ಡೀಸ್ ಸಂಸ್ಥೆಯ ಬ್ರಾಂಡೆಡ್ ಮಾರ್ಕೆಟ್ಸ್ ವಿಭಾಗದ ಸಿಇಒ ಎಂ.ರಮಣ ಹೇಳಿದ್ದಾರೆ.
'ಸ್ಥಳೀಯ ತಯಾರಕರು ಪ್ರಸ್ತುತ ತಂತ್ರಜ್ಞಾನವನ್ನು ತಿಳಿಯುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. ಅಕ್ಟೋಬರ್-ಸೆಪ್ಟೆಂಬರ್ ಅವಧಿಯಲ್ಲಿ ನಾವು ಸ್ಥಳೀಯವಾಗಿ ಸ್ಪುಟ್ನಿಕ್ ತಯಾರಿಸಲಿದ್ದೇವೆ" ಎಂದು ರಮಣ ಸುದ್ದಿಗಾರರಿಗೆ ತಿಳಿಸಿದರು.
ಭಾರತದಲ್ಲಿ ಸ್ಪುಟ್ನಿಕ್-ವಿ ತಯಾರಿಕೆಗಾಗಿ ಹೈದರಾಬಾದ್ ಮೂಲದ ರೆಡ್ಡೀಸ್ ಲ್ಯಾಬೊರೇಟರಿ ರಷ್ಯಾದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಸ್ಪುಟ್ನಿಕ್ ವಿ ತುರ್ತು ಬಳಕೆಗೆ ಭಾರತ ಸರ್ಕಾರ ಅನುಮತಿಯನ್ನೂ ನೀಡಿದೆ.