ಕಾಸರಗೋಡು: ಕಾಞಂಗಾಡು ನಗರಸಭೆಯ ಹಾದಿಬದಿ ವ್ಯಾಪಾರಿಗಳ ಕುರಿತ ಸರ್ವೇ ಇಂದಿನಿಂದ ಆರಂಭಗೊಳ್ಳಲಿದೆ.
ನಗರಸಭೆ ವ್ಯಾಪ್ತಿಯ ಹಾದಿಬದಿ ವ್ಯಾಪಾರಿಗಳ ಪುನಶ್ಚೇತನ ನಡೆಸುವ ಅಂಗವಾಗಿ ನಡೆಸುವ ಸರ್ವೇಯ ಅಂಗವಾಗಿ ನಗರಸಭೆಯ ಸಿಬ್ಬಂದಿಯ ನೇತೃತ್ವದಲ್ಲಿ ಸರ್ವೇ ನಡೆಯಲಿದೆ. ಸೋಮವಾರ ಮಧ್ಯಾಹ್ನ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ ಬಳಿಯ ಹಾದಿಬದಿ ವ್ಯಾಪಾರಿಗಳಿಂದ ಮಾಹಿತಿ ಸಂಗ್ರಹ ನಡೆಸುವ ಮೂಲಕ ನಗರಸಭೆಯ ಅಧ್ಯಕ್ಷೆ ಕೆ.ವಿ.ಸುಜಾತಾ ಸರ್ವೇಗೆ ಚಾಲನೆ ನಿಡುವರು. ನಗರಸಭೆಯ ಸಿಬ್ಬಂದಿ 7 ಗುಂಪುಗಳಾಗಿ ವಿಂಗಡನೆಗೊಂಡು ವಿವಿಧೆಡೆ ಮಾಹಿತಿ ಸಂಗ್ರಹಿಸುವರು.
ರಾಷ್ಟ್ರೀಯ ನಗರ ಉಪಜೀವನ ಮಿಷನ್ ನ ಹಾದಿಬದಿ ವ್ಯಾಪಾರಿಗಳ ಪತ್ತೆಗಿರುವ ಪ್ರಶ್ನಾವಳಿ ಹಿನ್ನೆಲೆಗೊಳಿಸಿ ಹಾದಿಬದಿ ವ್ಯಾಪಾರಿಗಳಿಂದ ಮಾಹಿತಿ ಸಂಗ್ರಹ ನಡೆಸಲಾಗುವುದು. ಹಾದಿಬದಿ ವ್ಯಾಪಾರಿಯ ವ್ಯಕ್ತಿಗತ ಮಾಹಿತಿ, ವ್ಯಾಪಾರದ ಸ್ವರೂಪ, ವ್ಯಾಪಾರ ನಡೆಸುವ ಸ್ಥಳ, ಇನ್ನಿತರ ಮಾಹಿತಿಗಳು ಹೀಗೆ 4 ವಿಭಾಗಗಳಲ್ಲಿ ಪ್ರಶ್ನಾವಳಿ ಸಿದ್ಧಗೊಂಡಿದೆ.
ಸರ್ವೇ ಸೋಮವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ನಡೆಯಲಿದೆ. ಸರ್ವೇ ನಡೆಯುವ ದಿನ ಎಲ್ಲ ಹಾದಿಬದಿ ವ್ಯಾಪಾರಿಗಳು ತಮ್ಮ ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ( ಆಧಾರ್ ಕಾರ್ಡ್ ಇಲ್ಲದೇ ಇರುವವರು ತಮ್ಮ ಗುರುತು ಚೀಟಿ) ತಮ್ಮ ಬಳಿ ಇರಿಸಿಕೊಳ್ಳಬೇಕು. ಸರ್ವೇಯಲ್ಲಿ ಪತ್ತೆಯಾದ ಎಲ್ಲ ಹಾದಿಬದಿ ವ್ಯಾಪಾರಿಗಳಿಗೆ ಗುರುತುಚೀಟಿ ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷೆ ತಿಳಿಸಿರುವರು.