ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚಾಗಿ ಬಾಧಿಸಲಿದೆ ಎಂಬ ವಿಷಯ ಆತಂಕ ಮೂಡಿಸಿರುವ ಮಧ್ಯೆ, ಮಕ್ಕಳಿಗೆ ಲಸಿಕೆ ಯಾವಾಗಿನಿಂದ ಲಭಿಸಲಿದೆ ಎಂಬುದನ್ನು ಸಾರ್ವಜನಿಕರು ನಿರೀಕ್ಷೆಯಿಂದ ನೋಡುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಮಾಹಿತಿಯನ್ನು ನೀಡಿದ್ದಾರೆ.
ಕೊರೊನಾ ಮೂರನೇ ಅಲೆಯ ಆಗಮನ, ದೇಶಾದ್ಯಂತ ಶಾಲೆಗಳ ಮರು ಆರಂಭದ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆಯ ಸರಪಳಿಯನ್ನು ತುಂಡರಿಸುವ ಕುರಿತಂತೆ ಮಹತ್ವದ ಹೆಜ್ಜೆ ಇಡಲಾಗುತ್ತಿದೆ. ಅದರಲ್ಲೂ ಕೊರೊನಾ ಮೂರನೇ ಅಲೆ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ದೇಶದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದಾರೆ.
ಸದ್ಯದಲ್ಲೇ ಭಾರತದಲ್ಲಿ ಲಸಿಕೆ ತಯಾರಿಕೆ ಸಂಬಂಧ ಬಹಳಷ್ಟು ಕಂಪನಿಗಳಿಗೆ ಪರವಾನಗಿ ಸಿಗಲಿವೆ. ಮಾತ್ರವಲ್ಲ ಲಸಿಕೆ ತಯಾರಿಸುವ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಮಾತ್ರವಲ್ಲ, ಸೆಪ್ಟೆಂಬರ್ನಲ್ಲೇ ಕೊರೊನಾ ಮೂರನೇ ಅಲೆ ಪ್ರವೇಶ ಸಾಧ್ಯತೆ ಹಿನ್ನೆಲೆಯಲ್ಲಿ ಸರ್ಕಾರ ಮಕ್ಕಳಿಗೆ ಬಹುತೇಕ ಮುಂದಿನ ತಿಂಗಳಲ್ಲೇ ಲಸಿಕೆಯನ್ನು ನೀಡಲಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.