ನವದೆಹಲಿ: ದೇಶದಲ್ಲಿ ಕೋವಿಡ್ ಸಾವುಗಳ ಲೆಕ್ಕಾಚಾರದ ವಿವಾದ ಮಧ್ಯೆ, ಆಸ್ಪತ್ರೆಗಳಲ್ಲಿ ಕೋವಿಡ್ ಸಾವಿನ ಆಡಿಟ್ ನಡೆಸುವಂತೆ ಹಾಗೂ ಯಾವುದೇ ಪ್ರಕರಣಗಳು ಅಥವಾ ಸಾವಿನ ವರದಿ ಕೈಬಿಡದಂತೆ ವರದಿ ಸಲ್ಲಿಸುವಂತೆ ಯಾವಾಗಲೂ ರಾಜ್ಯಗಳಿಗೆ ಸಲಹೆ ನೀಡುತ್ತಿದ್ದಾಗಿ ಕೇಂದ್ರ ಸರ್ಕಾರ ಗುರುವಾರ ಪುನರುಚ್ಚರಿಸಿದೆ.
ಎಲ್ಲಾ ಕೋವಿಡ್ ಸಾವುಗಳನ್ನು ಸರಿಯಾಗಿ ದಾಖಲಿಸಲು ಡಬ್ಲ್ಯುಎಚ್‌ಒ ಶಿಫಾರಸು ಮಾಡಿದ ಐಸಿಡಿ -10 ಕೋಡ್‌ಗಳನ್ನು ಆಧರಿಸಿದ ಐಸಿಎಂಆರ್ ಮಾರ್ಗಸೂಚಿಗಳನ್ನು ದೇಶ ಅನುಸರಿಸುತ್ತದೆ ಎಂದು ಸರ್ಕಾರ ಹೇಳಿದೆ. ಈವರೆಗೂ ದೇಶದಲ್ಲಿ ಕೋವಿಡ್ ನಿಂದ 4 ಲಕ್ಷ ಸಾವುಗಳು ದೃಢಪಟ್ಟಿವೆ. ಆದರೆ, ಕೋವಿಡ್- ಸಾವುಗಳ ಸಂಖ್ಯೆ 25ರಿಂದ 50 ಲಕ್ಷ ನಡುವಣ ಇದೆ ಎಂದು ಕೆಲ ಸಂಶೋಧಕರು ಅಂದಾಜಿಸಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಯುಎಸ್ ಮತ್ತು ಯುರೋಪಿಯನ್ ದೇಶಗಳಲ್ಲಿನ ಇತ್ತೀಚಿನ ಅಧ್ಯಯನಗಳ ಆವಿಷ್ಕಾರಗಳನ್ನು ಉಲ್ಲೇಖಿಸಿ ಕೆಲವು ವರದಿಗಳು ಬಂದಿವೆ. ಇದರಲ್ಲಿ ಸೆರೊಪೊಸಿಟಿವಿಟಿಯನ್ನು ಆಧಾರದ ಮೇಲೆ ವಯಸ್ಸು, ನಿರ್ದಿಷ್ಠ ಸೋಂಕಿನ ಪ್ರಮಾಣವನ್ನು ಬಳಸಿಕೊಂಡು ದೇಶದಲ್ಲಿನ ಹೆಚ್ಚುವರಿ ಸಾವನ್ನು ಲೆಕ್ಕಾಚಾರ ಮಾಡಲಾಗುತ್ತದೆ ಎಂದು ಹೇಳಿದೆ.
ಹೆಚ್ಚುವರಿ ಕೋವಿಡ್-ಸಾವುಗಳಲ್ಲಿ ಸತ್ಯಾಂಶವಿಲ್ಲ, ಸಂಪೂರ್ಣವಾಗಿ ತಪ್ಪಿನಿಂದ ಕೂಡಿದೆ. ಯಾವುದೇ ಕಾರಣದಿಂದ ಸತ್ತಿದ್ದರೂ ಅದನ್ನು ಕೋವಿಡ್ ಸಾವು ಎಂದು ಲೆಕ್ಕಾಚಾರ ಮಾಡಲಾಗಿದೆ. ಈ ಸಾವುಗಳು ಸಂಪೂರ್ಣವಾಗಿ ದಾರಿತಪ್ಪಿಸುವಂತಹದ್ದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ದೃಢವಾದ ಮತ್ತು ಕಾನೂನು ಆಧಾರಿತ ಮರಣ ನೋಂದಣಿ ವ್ಯವಸ್ಥೆಯಿದೆ. ಸಾಂಕ್ರಾಮಿಕ ರೋಗದ ತತ್ವಗಳು ಮತ್ತು ಅದರ ನಿರ್ವಹಣೆಯ ಪ್ರಕಾರ ಕೆಲವು ಪ್ರಕರಣಗಳು ಪತ್ತೆಯಾಗುವುದಿಲ್ಲವಾದರೂ, ಸಾವು ತಪ್ಪಿಸಿಕೊಳ್ಳುವುದು ಅಸಂಭವವಾಗಿದೆ ಎಂದು ಕೇಂದ್ರ ಸರ್ಕಾರ ಒತ್ತಿ ಹೇಳಿದೆ. ಸರ್ಕಾರದ ಪ್ರಕಾರ, ಡಿಸೆಂಬರ್ 31ರಲ್ಲಿ ಶೇ.1.45 ರಷ್ಟಿದ್ದ ಕೋವಿಡ್ ಮರಣ ಪ್ರಮಾಣ, ಏಪ್ರಿಲ್ -ಮೇ ನಲ್ಲಿ ಎರಡನೇ ಅಲೆ ವೇಳೆಯಲ್ಲಿ ಅನಿರೀಕ್ಷಿತ ರೀತಿಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾದ ನಂತರವೂ ಪ್ರಸ್ತುತ ಶೇ.1.34 ರಷ್ಟಿದೆ.
ಎರಡನೇ ಅಲೆ ವೇಳೆಯಲ್ಲಿ ಇಡೀ ಆರೋಗ್ಯ ವ್ಯವಸ್ಥೆ ಪ್ರಕರಣಗಳ ಪರಿಣಾಮಕಾರಿ ಕ್ಲಿನಿಕಲ್ ನಿರ್ವಹಣೆ, ವೈದ್ಯಕೀಯ ನೆರವು, ಸರಿಯಾದ ವರದಿಯತ್ತ ಗಮನ ಹರಿಸಲಾಗಿತ್ತು. ಈ ವರದಿಯ ಜೊತೆಗೆ, ಕಾನೂನು ಆಧಾರಿತ ನಾಗರಿಕ ನೋಂದಣಿ ವ್ಯವಸ್ಥೆ ದೇಶದ ಎಲ್ಲಾ ಜನನ ಮತ್ತು ಮರಣಗಳನ್ನು ನೋಂದಾಯಿಸಿಕೊಳ್ಳುವುದನ್ನು ಖಾತ್ರಿಗೊಳಿಸುತ್ತದೆ ಎಂದು ಸರ್ಕಾರ ತಿಳಿಸಿದೆ.