ನವದೆಹಲಿ: ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ದೊಡ್ಡ ಮಟ್ಟದ ರಚನಾತ್ಮಕ ಬದಲಾವಣೆಗಳಿಗೆ ಯೋಜನೆ ರೂಪಿಸಿದ್ದು, ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಪಕ್ಷದ ಸಾಂಸ್ಥಿಕ ರಚನೆಯಲ್ಲಿ ಪ್ರಮುಖ ಸ್ಥಾನ ನೀಡುವ ಸಾಧ್ಯತೆ ವ್ಯಕ್ತಗೊಂಡಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ (cwc) ಶೀಘ್ರದಲ್ಲೇ ಸಭೆ ಸೇರಿ ಪಕ್ಷದ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಎಐಸಿಸಿ ಅಧಿವೇಶನ ಆಗಸ್ಟ್‌ನಲ್ಲಿ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಕಮಲ್ ನಾಥ್ ಅವರು ಕಾಂಗ್ರೆಸ್‌ನಲ್ಲಿ ಪ್ರಮುಖ ಜವಾಬ್ದಾರಿ ಪಡೆಯುವ ಸಾಧ್ಯತೆಯಿರುವುದಾಗಿ ಮೂಲಗಳು ತಿಳಿಸಿವೆ. ಕಮಲ್ ನಾಥ್ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆ ವ್ಯಕ್ತಗೊಂಡಿದ್ದು, ಅಧೀಕೃತವಾಗಿ ಈ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಗುರುವಾರ ಕಮಲ್ ನಾಥ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಈ ಭೇಟಿ ಹಿನ್ನೆಲೆಯಲ್ಲಿ ಪಕ್ಷದಲ್ಲಿನ ಬದಲಾವಣೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಪುನರ್‌ರಚನೆಯಾಗಲಿರುವ ಕಾಂಗ್ರೆಸ್‌ನಲ್ಲಿ ಉನ್ನತ ಸ್ಥಾನಕ್ಕೆ ಕಮಲ್ ನಾಥ್ ಹೆಸರು ಕೇಳಿಬರುತ್ತಿದೆ.