ನವದೆಹಲಿ: ವಿರಳವಾಗಿ ಬಳಸುವ ಇಂಗ್ಲಿಷ್ ಪದಗಳ ಬಗ್ಗೆ ಹೆಚ್ಚು ಒಲವು ಹೊಂದಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್, ಶುಕ್ರವಾರ ತಮ್ಮ ನಿಘಂಟುಗಳಿಗೆ ಇನ್ನೊಂದು ಪದವನ್ನು ಸೇರಿಸಿದ್ದಾರೆ ಅದುವೇ, 'ಪೊಗೊನೋಟ್ರೋಫಿ' (Pogonotrophy).
''ಗಡ್ಡವನ್ನು ಬೆಳಸುವುದು'' ಎಂದು ಅರ್ಥ ಹೊಂದಿರುವ ''ಪೊಗೊನೋಟ್ರೋಫಿ'' ಎಂಬ ಹೊಸ ಪದವನ್ನು ತನ್ನ ಸ್ನೇಹಿತರಿಂದ ಕಲಿತಿರುವ ಶಶಿ ತರೂರ್, ಈ ಪದವನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿಯ ಕಾಲೆಳೆದಿದ್ದಾರೆ.
ಹೆಚ್ಚಾಗಿ ಟ್ವೀಟ್ಟರ್‌ನಲ್ಲಿ ಹೊಸ ಪದವನ್ನು ಬಳಸಿ ಅದನ್ನು ವಿವರಿಸುವ ಮೂಲಕವೇ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುವ ಶಶಿ ತರೂರ್ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಟ್ವೀಟ್ಟರ್‌ನಲ್ಲಿ ಶಶಿ ತರೂರ್‌ನ ಅಭಿಮಾನಿಯೋರ್ವರು ತಾನು ಹೊಸ ಪದ ಕಲಿಯಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಡಾ.ಪ್ರಿಯಾ ಆನಂದ್ ಎಂಬವರು, ''ಸರ್, ನಿಮ್ಮ ಭಾಷಣಗಳನ್ನು ಹೊರತುಪಡಿಸಿ ನಾನು ಕೆಲವು ಹೊಸ ಪದಗಳನ್ನು ಕಲಿಯಲು ಕಾಯುತ್ತಿದ್ದೇನೆ. ಹೊಸ ಪದದ ಮೂಲಕ ಮನಸ್ಸನ್ನು ಕೆರಳಿಸುವುದು ಯಾವಾಗಲೂ ಅದ್ಭುತ,'' ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಶಿ ತರೂರ್, ''ಅರ್ಥಶಾಸ್ತ್ರಜ್ಞನಾದ ನನ್ನ ಸ್ನೇಹಿತ ರಾಥಿನ್ ರಾಯ್ ಇಂದು ನನಗೆ ಹೊಸ ಪದವನ್ನು ಕಲಿಸಿದರು. ಅದುವೇ ಪೊಗೊನೋಟ್ರೋಫಿ. ಇದರರ್ಥ 'ಗಡ್ಡವನ್ನು ಬೆಳೆಸುವುದು'. ಪ್ರಧಾನಮಂತ್ರಿಯವರ ಪೊಗೊನೋಟ್ರೋಫಿ ಸಾಂಕ್ರಾಮಿಕ ಮುನ್ಸೂಚನೆಯಾಗಿದೆ,'' ಎಂದು ವ್ಯಂಗ್ಯವಾಡಿದ್ದಾರೆ.
ಶಶಿ ತರೂರ್‌ನ ಈ ಹೊಸ ಪದ ಪರಿಚಯದ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕೆಲವರು, "ಪ್ರಪಂಚವು ಆಕ್ಸ್‌ಫರ್ಡ್ ನಿಘಂಟನ್ನು ಹೊಂದಿದ್ದರೆ ಭಾರತಕ್ಕೆ ಏಕೆ ತಾರೂರು ನಿಘಂಟು ಇಲ್ಲ," ಎಂದು ಹೇಳಿದ್ದಾರೆ. ಹಾಗೆಯೇ ಇನ್ನೋರ್ವ ವ್ಯಕ್ತಿ, "ಥಾರೂರಿಕ್ಷನರಿ ಮೂಲಕ ಈ ಪದ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು" ಎಂದಿದ್ದಾರೆ. ಇನ್ನು ಮತ್ತೋರ್ವ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಕಾಲೆಳೆದಿದ್ದು, ಮುಂದಿನ ರ್ಯಾಲಿಯಲ್ಲಿ ನನ್ನನ್ನು ಪಾಗಲೋಟ್ರೋಫಿ ಅಥವಾ ಪಕೋಡಾಟ್ರೋಫಿ ಎಂದು ಕರೆದರು ಎನ್ನಬಹುದು ಎಂದು ಲೇವಡಿ ಮಾಡಿದ್ದಾರೆ.
ಶಶಿ ತರೂರ್, ಹೊಸ ಪದ ಬಳಕೆ ಮಾಡುವುದು ಇದೇ ಮೊದಲೇನಲ್ಲ. ಈ ಹಿಂದೆ ಫ್ಲೋಕಿನೌಸಿನಿಹಿಲಿಪಿಲಿಫಿಕೇಷನ್ (floccinaucinihilipilification) ಎಂಬ ಪದವನ್ನು ಟ್ವೀಟ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಪದವು ಈಗಲೂ ಚರ್ಚೆಯ ವಿಷಯವಾಗಿದೆ. ಹಲವಾರು ಮಂದಿ ಈ ಪದವನ್ನು ಉಚ್ಛಾರ ಮಾಡುವುದೇ ದೊಡ್ಡ ಸಾಹಸ ಎಂದಿದ್ದಾರೆ. ಈ ಪದದ ಅರ್ಥ ಯಾವುದನ್ನಾದರೂ ನಿಷ್ಪ್ರಯೋಜಕವೆಂದು ಅಂದಾಜು ಮಾಡುವ ಕ್ರಿಯೆ ಅಥವಾ ಅಭ್ಯಾಸವಾಗಿದೆ. ಇನ್ನೂ ಹಲವು ಪದಗಳನ್ನು ಶಶಿ ತರೂರ್ ಬಳಸಿದ್ದಾರೆ.