ವಿಶ್ವಸಂಸ್ಥೆ: ಮುಂದಿನ ತಿಂಗಳುಗಳಲ್ಲಿ ಡೆಲ್ಟಾ ರೂಪಾಂತರಿ ಕೊರೋನ ವೈರಾಣುವಿನ ಪ್ರಬಲ ತಳಿಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಡೆಲ್ಟಾ ರೂಪಾಂತರಿ ಪ್ರಸ್ತುತ 96 ದೇಶಗಳಲ್ಲಿ ಪತ್ತೆಯಾಗಿದ್ದು ಅತೀ ವೇಗವಾಗಿ ಹರಡಬಹುದಾದ ಜಗತ್ತಿನ ಅತಿ ಪ್ರಬಲವಾದ ತಳಿಯಾಗಲಿದೆ ಎಂದು ವಿಶ್ವಸಂಸ್ಥೆ ಸಾಂಕ್ರಾಮಿಕದ ವಾರದ ಅಪ್ ಡೇಟ್ ನಲ್ಲಿ ಎಚ್ಚರಿಕೆ ನೀಡಿದೆ.
ಈ ವರೆಗಿನ ಕೊರೋನಾ ವೈರಾಣುವನ್ನು ಎದುರಿಸಲು ಯಾವೆಲ್ಲಾ ಕ್ರಮಗಳನ್ನು ಸಾಮಾಜಿಕವಾಗಿ, ವೈಯಕ್ತಿಕವಾಗಿ, ಸಮುದಾಯದಲ್ಲಿ ಕೈಗೊಂಡಿದ್ದೆವೋ ಅದೇ ಕ್ರಮಗಳನ್ನು ಈಗ ಡೆಲ್ಟಾ ರೂಪಾಂತರಿಯನ್ನು ಎದುರಿಸುವುದಕ್ಕೂ ಕೈಗೊಳ್ಳಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಕಡಿಮೆ ಲಸಿಕೆ ಪ್ರಮಾಣವನ್ನು ಹೊಂದಿರುವ ರಾಷ್ಟ್ರಗಳಲ್ಲಿ ಡೆಲ್ಟಾ ಅಪಾಯ ಹೆಚ್ಚಿರಲಿದೆ. ಈವರೆಗೂ ಯಾವೆಲ್ಲಾ ದೇಶಗಳು ಸಾರ್ವಜನಿಕ ಆರೋಗ್ಯ ಹಾಗೂ ಸಾಮಾಜಿಕ ನಿರ್ಬಂಧಗಳಿಗೆ ವಿನಾಯಿತಿ ತೋರಿಸಿದ್ದವೋ ಆಗೆಲ್ಲಾ ಜಾಗತಿಕವಾಗಿ ಕೊರೋನಾ ಸೋಂಕು ಹೆಚ್ಚಳವಾದ ಉದಾಹರಣೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ 172 ರಾಷ್ಟ್ರಗಳಲ್ಲಿ ಆಲ್ಫಾ ರೂಪಾಂತರಿ ಬೀಟಾ ವೈರಾಣು ರೂಪಾಂತರಿ 120 ದೇಶಗಳಲ್ಲಿ (ಹೊಸದಾಗಿ ಒಂದು ದೇಶ) ಗಾಮಾ ರೂಪಾಂತರಿ 72 ದೇಶಗಳಲ್ಲಿ (ಹೊಸದಾಗಿ ಒಂದು ದೇಶ) ಹಾಗೂ ಡೆಲ್ಟಾ 96 ದೇಶಗಳಲ್ಲಿ (11 ಹೊಸ ದೇಶಗಳಲ್ಲಿ ಹೊಸ ಪ್ರಕರಣಗಳು) ವರದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
ಇದೇ ವೇಳೆ ಅತಿ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವ ಪಟ್ಟಿಯಲ್ಲಿ ಕಳೆದ ಒಂದಷ್ಟು ವಾರಗಳಿಂದ ಭಾರತ ಇಲ್ಲ ಎಂಬುದು ಸಮಾಧಾನಕರ ಅಂಶವಾಗಿದ್ದು, ಬ್ರೆಜಿಲ್ ನಲ್ಲಿ ಅತಿ ಹೆಚ್ಚು ಪ್ರಕರಣಗಳು (521,298) ಪತ್ತೆಯಾಗಿದೆ.